ರೈತರು ಎಪಿಎಂಸಿ ಕೈಗೊಂಬೆ ಆಗುವುದು ಬೇಡ : ಕೇಂದ್ರ ಸಚಿವ ಸದಾನಂದಗೌಡ

Spread the love

ಮೈಸೂರು, ಫೆ.6- ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ ಇನ್ನೂ ರೈತನಿಗೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಆದರೆ ನಾವೀಗ ರೈತ ಬೆಳೆದ ಬೆಳೆಯನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದೇವೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಬೆಂಬಲ ಬೆಲೆ ನೀಡಿದ್ದು ನರೇಂದ್ರ ಮೋದಿ ಸರ್ಕಾರ.

ರೈತರು ಎಪಿಎಂಸಿ ಕೈಗೊಂಬೆ ಆಗುವುದು ಬೇಡ ಎಂಬ ಕಾರಣಕ್ಕೆ ಬೆಳೆಯನ್ನು ಸ್ವತಂತ್ರವಾಗಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಇದನ್ನು ಅವರು ಅರ್ಥ ಮಾಡಿಕೊಳ್ಳದೆ ಹಠ ಮಾಡುತ್ತಿದ್ದಾರೆ ಎಂದರು. ನೂತನ ಕೃಷಿ ನೀತಿಯಿಂದ ರೈತರು ಬಂಡವಾಳಶಾಹಿಗಳ ಕೈಗೊಂಬೆಯಾಗುತ್ತಾರೆ ಎಂಬುದು ಸುಳ್ಳು. ಪಟ್ಟಭದ್ರ ಹಿತಾಸಕ್ತಿಗಳಿಂದ ಹೋರಾಟ ನಡೆಯುತ್ತಿದೆ. ಕೃಪಾಫೋಷಿತ ಜನರ ಪ್ರೇರಣೆಯಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ನಾವು ಕಾಂಪ್ರಮೈಸ್ ಆಗಿದ್ದೇವೆ. ಮಾತುಕತೆ ವೇಳೆ ಯಾವುದನ್ನೂ ಒಪ್ಪಿಕೊಳ್ಳದೆ ಸಭೆಯನ್ನು ವಿಫಲಗೊಳಿಸುತ್ತಿದ್ದಾರೆ ಎಂದರು. ಪಾಪ್‍ಸಿಂಗರ್ ರಿಹಾನಾ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಸದಾನಂದಗೌಡರು, ರಿಹಾನಾ ಏನಾದರೂ ಭತ್ತದ ಗದ್ದೆ ನೋಡಿದ್ದಾರಾ ಎಂದು ಪ್ರಶ್ನಿಸಿದರು.

ಬಹುಶಃ ಗದ್ದೆ ಬಳಿ ನಿಂತು ಫೋಟೋ ತೆಗೆಸಿಕೊಂಡು ಹೋಗಿರಬಹುದು. ರೈತರ ಕಷ್ಟದ ಬಗ್ಗೆ ಆಕೆಗೆ ಏನು ಗೊತ್ತಿದೆ? ರೈತರು ಬೆಳೆಯನ್ನು ಹೇಗೆ ಮಾರಾಟ ಮಾಡುತ್ತಾರೆಂಬುದು ಗೊತ್ತಾ? ವಿದೇಶಿಯರ ಕೈಗೊಂಬೆಯಾಗಿ ಹೀಗೆ ಮಾತನಾಡುತ್ತಿದ್ದಾರೆ ಎಂದು ಸದಾನಂದಗೌಡ ಅಸಮಾಧಾನ ವ್ಯಕ್ತಪಡಿಸಿದರು.

Facebook Comments