“ಮೇಕೆದಾಟು ಯೋಜನೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ”

ಬೆಂಗಳೂರು,ಆ.7- ರಾಜಧಾನಿ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಮೇಕೆದಾಟು ಬಳಿ ನಿರ್ಮಿಸಲು ಉದ್ದೇಶಿಸಿರುವ ಯೋಜನೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಪರೋಕ್ಷವಾಗಿ ತಮಿಳುನಾಡಿಗೆ ತಿರುಗೇಟು ನೀಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಇದು ಕುಡಿಯುವ ನೀರು ಯೋಜನೆಯಾಗಿರುವುದರಿಂದ ಯಾರೂ ಕೂಡ ಅಡ್ಡಿಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಯಾರು ಎಷ್ಟೇ ಅಡ್ಡಿಪಡಿಸಿದರೂ ನಾವು ಅದನ್ನು ಮಾಡೇ ತೀರುತ್ತೇವೆ. ಇದು ನಮ್ಮ ಹಕ್ಕಾಗಿರುವುದರಿಂದ ಬಿಜೆಪಿ ಯೋಜನೆಯನ್ನು ಅನುಷ್ಠಾನ ಮಾಡೇ ತೀರುತ್ತದೆ ಎಂದರು.

ಯಾರೋ ಒಂದಿಬ್ಬರು ಅಡ್ಡಿಪಡಿಸುತ್ತಿದ್ದಾರೆ ಎಂಬ ಕಾರಣಕ್ಕೆ ಯೋಜನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದನ್ನು ಅನುಷ್ಠಾನ ಮಾಡುವುದರಿಂದ ನೀರನ್ನು ಇನ್ನಷ್ಟು ಸಂಗ್ರಹಿಸಿಟ್ಟುಕೊಳ್ಳಲಬಹುದು. ಇದರಿಂದ ಅನೇಕ ರಾಜ್ಯಗಳಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರು ಯೋಜನೆ ಪರವಾಗಿಯೇ ಕೆಲಸ ಮಾಡುತ್ತೇವೆ. ರಾಜ್ಯದ ನೆಲಜಲದ ವಿಷಯದಲ್ಲಿ ನಾವು ಎಂದಿಗೂ ರಾಜಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೋವಿಡ್ ನಂತಹ ಮಹಾಮಾರಿ ಇಡೀ ಜಗತ್ತಿಗೆ ಬಂದಿದೆ. ಒಂದು ಮತ್ತು ಎರಡನೇ ಅಲೆ ನಿಯಂತ್ರಣ, ಸರ್ಕಾರ ತೆಗೆದುಕೊಂಡ ನಿರ್ಧಾರ ಗೊತ್ತಿದೆ. ಆರ್ಥಿಕತೆ ಕುಸಿದಿದೆ. ಕೇವಲ ಕೋರೊನಾ ಬಗ್ಗೆ ಅಷ್ಟೇ ಅಲ್ಲ. ದೇಶದ ಎಲ್ಲಾ ವಿಚಾರಗಳ ಬಗ್ಗೆ ಕೂಡ ಚರ್ಚೆ ಮಾಡಬೇಕಿದೆ. ಪಾಕಿಸ್ತಾನ, ಚೀನಾ ಸಾಕಷ್ಟು ತೊಂದರೆ ಕೊಡುತ್ತಿದೆ ಎಂದರು. ಮುಂಗಾರು ಅಧಿವೇಶನ ಸರಿಯಾಗಿ ನಡೆಯಲು ಬಿಡದೆ ಪಾರ್ಲಿಮೆಂಟ್‍ನ್ನು ಅಪವಿತ್ರ ಮಾಡಿದೆ. ಪ್ರಶ್ನೋತ್ತರ ಕಾಲ ಅತ್ಯಂತ ಮಹತ್ವದ ಕಾಲ. ಇದೇ ಸಂದರ್ಭದಲ್ಲಿ ಹಲವು ಪ್ರಶ್ನೆಗಳ ಮೇಲೆ ಚರ್ಚೆ ನಡೆಯುತ್ತದೆ. ಭವಿಷ್ಯ ಹಾಗೂ ರಾಜ್ಯಕ್ಕೆ ಹಾಗೂ ಆಯಾ ಲೋಕಸಭೆ ಕ್ಷೇತ್ರದ ಸಮಸ್ಯೆಗೆ ಸಂಬಂಧಿಸಿದ ಪ್ರಶ್ನೆ ಇರುತ್ತದೆ.

ಅತ್ಯಂತ ಮಹತ್ವದ ಸದನವನ್ನು ಕೆಟ್ಟ ರೀತಿಯಲ್ಲಿ ಇಂದು ಕಾಂಗ್ರೆಸ್ ನಡೆಸಿಕೊಂಡಿದೆ. ಕೊರೊನಾ ಎರಡನೇ ಅಲೆಯಲ್ಲಿ ತಕ್ಷಣವೇ ಅಧಿವೇಶನ ಕರೆಯಲಾಗಿದೆ. ಪ್ರಥಮ ದಿನದ ಅಧಿವೇಶನದಲ್ಲೇ ಕಾಂಗ್ರೆಸ್ ಪಲಾಯನವಾದ ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ ಅವರು, ಇದು ಕಾಂಗ್ರೆಸ್ ಪ್ರಜಾಪ್ರಭುತ್ವಕ್ಕೆ ಮಾಡಿದಂತ ಅಪಮಾನ. ಇಡೀ ಕಾಂಗ್ರೆಸ್ ಅಷ್ಟೇ ಅಲ್ಲ ಮಿತ್ರಪಕ್ಷಗಳು ಅವರ ಜೊತೆಗೂಡಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪೆಗಾಸಿಸ್ ವಿಚಾರ ಟೂಲ್ ಕಿಟ್ ಮುಂದುವರಿದ ಭಾಗ ಅಷ್ಟೇ. ಆರ್ಟಿಕಲ್ 370 ಬಳಿಕ ಕಾಶ್ಮೀರ ಈಗ ಹೇಗಿದೆ ನೋಡಿ. ಭಯೋತ್ಪಾದಕ ಚಟುವಟಿಕೆ ತಡೆಯಲು ನಾವು ಮುಂದಾಗಿದ್ದರೆ ಇದಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತದೆ ಎಂದರು. ಲೋಕಸಭೆಯಲ್ಲಿ ವಿಪಕ್ಷ ಸ್ಥಾನ ಪಡೆಯೋಕೆ ಆಗಿಲ್ಲ. ಕಾಂಗ್ರೆಸ್ ರಾಜ್ಯ ಯುವ ಘಟಕದ ಆಯ್ಕೆ ಗೊಂದಲ, ಪಂಚ ರಾಜ್ಯ ಚುನಾವಣೆಯಲ್ಲಿ ಸೋಲು ಹೀಗೆ ಎಲ್ಲಾ ರೀತಿಯಲ್ಲಿ ವಿಫಲವಾದ ಕಾಂಗ್ರೆಸ್ ಮತ್ತೆ ಲೋಕಸಭೆ ಸದನದಲ್ಲಿ ಸರಿಯಾಗಿ ಭಾಗಿಯಾಗುತ್ತಿಲ್ಲ ಎಂದು ಟೀಕಿಸಿದರು.