ಕಮಲ್‍ಹಾಸನ್ ಪಕ್ಷದ ಖಜಾಂಚಿ ಮನೆಯಲ್ಲಿ 80 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ..!

ಚೆನ್ನೈ, ಮಾ.19- ನಟ ಕಮಲ್‍ಹಾಸನ್ ಸ್ಥಾಪಿಸಿರುವ ಮಕ್ಕಳ ನಿಧಿ ಮಹಿಮ್ ಪಕ್ಷದ ಖಜಾಂಚಿ ಮನೆ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು 11.50 ಕೋಟಿ ನಗದು ಸೇರಿದಂತೆ 80 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಿದ್ದಾರೆ.  ಬುಧವಾರ ಮತ್ತು ಗುರುವಾರ ತಮಿಳುನಾಡಿನ ತ್ರಿಪುರಾ, ಧರ್ಮಾಪುರಂ, ಚೆನ್ನೈ ಸೇರಿದಂತೆ ಐದು ಜಾಗಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ತಪಾಸಣೆ ನಡೆಸಿದ್ದರು.

ತ್ರಿಪುರಾದ ಪ್ರಮುಖ ಉದ್ಯಮಿಯೂ ಆಗಿರುವ ಪಕ್ಷದ ಖಜಾಂಚಿ ಚಂದ್ರಶೇಖರ್ ಅವರ ಮನೆಯಲ್ಲಿ ತಪಾಸಣೆ ನಡೆಸಿದಾಗ ನಿರ್ದಿಷ್ಟ ಆದಾಯ ಮೂಲದ ಮಾಹಿತಿ ಇಲ್ಲದ 11.50 ಕೋಟಿ ರೂ. ನಗದು ಪತ್ತೆಯಾಗಿದೆ. ಜತೆಗೆ 80 ಕೋಟಿ ಅಕ್ರಮ ಆಸ್ತಿಯ ದಾಖಲೆ ಪತ್ರಗಳು ಸಿಕ್ಕಿವೆ ಎಂದು ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ 6ರಂದು ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಪ್ರಚಾರದ ಕಾವು ಬಿರುಸು ಪಡೆದುಕೊಂಡಿದೆ.

ಎಂಎನ್‍ಎಂ ಪಕ್ಷದ ಸಂಸ್ಥಾಪಕರೂ ಆಗಿರುವ ನಟ ಕಮಲ್‍ಹಾಸನ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ತಮಿಳುನಾಡಿನ ಆರ್ಥಿಕತೆಯನ್ನು ಒಂದು ಬಿಲಿಯನ್ ಡಾಲರ್‍ಗೆ ಏರಿಸುವ ಭರವಸೆ ನೀಡಿದ್ದಾರೆ. ಈ ಮಧ್ಯೆ ಚಂದ್ರಶೇಖರ್ ಮನೆ ಮೇಲೆ ನಡೆದಿರುವ ಆದಾಯ ತೆರಿಗೆ ದಾಳಿ ರಾಜಕೀಯ ಪ್ರೇರಿತ ಎಂಬ ಟೀಕೆಯನ್ನು ಕಮಲ್‍ಹಾಸನ್ ಮಾಡಿದ್ದಾರೆ.