ಬೆಂಗಳೂರು,ಜ.24-ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಪರೀಕ್ಷಾ ಚಟುವಟಿಕೆಯ ಇ-ಸಹಮತಿ ತಂತ್ರಾಂಶ ಸೇವೆಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಚಾಲನೆ ನೀಡಿದರು. ಉನ್ನತ ಶಿಕ್ಷಣ ಇಲಾಖೆ ಹಾಗೂ ಇ-ಆಡಳಿತ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿದರು.
ಪದವಿ ಪೂರ್ವ ಪರೀಕ್ಷಾ ಮಂಡಳಿ, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ಎನ್‍ಎಡಿ ಸಹಯೋಗದೊಂದಿಗೆ ಇ-ಸಹಮತಿ ತಂತ್ರಾಂಶದ ಮೂಲಕ ಪಡೆಯಬಹುದಾಗಿದೆ. ಯಾವುದೇ ವಿದ್ಯಾರ್ಥಿ ಡಿಜಿಲಾಕರ್‍ನ್ನು ಡೌನ್‍ಲೋಡ್ ಮಾಡಿಕೊಂಡು ಬಳಸಬಹುದಾಗಿದೆ. ಇದರಿಂದ ಪ್ರಮಾಣ ಪತ್ರ ತಿದ್ದುವ ತಿರುಚುವ, ನಕಲಿ ಮಾಡುವುದಕ್ಕೆ ಕಡಿವಾಣ ಬೀಳುತ್ತದೆ. ಅಲ್ಲದೆ ಪ್ರಮಾಣ ಪತ್ರಗಳ ಪರಿಶೀಲನೆ ತ್ವರಿತವಾಗಿ ನಡೆಯಲಿದೆ.
ನಿಗದಿತ ಉದ್ದೇಶಕ್ಕಾಗಿ ಮಾತ್ರ ದತ್ತಾಂಶ ಬಳಕೆ ಸೀಮಿತವಾಗಿದೆ. ಇದು ಕಾನೂನಾತ್ಮಕ ಪಾರದರ್ಶಕ ಮತ್ತು ಪ್ರಾಮಾಣಿಕತೆ ಹೊಂದಿದ್ದು ಗೌಪ್ಯತೆ ಕಾಪಾಡಲಾಗುತ್ತದೆ ಎಂದು ಸಚಿವರು ವಿವರಿಸಿದರು.ಉನ್ನತ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಎಂಬ ತೀರ್ಮಾನ ಹಿಂದಕ್ಕೆ ಪಡೆದಿಲ್ಲ. ಕಡ್ಡಾಯಗೊಳಿಸದಂತೆ ನ್ಯಾಯಾಲಯ ನೀಡಿರುವ ನಿರ್ದೇಶನವನ್ನು ಪಾಲಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಅತಿಥಿ ಉಪನ್ಯಾಸಕರ ಹುದ್ದೆಗೆ 60 ಸಾವಿರ ಅರ್ಜಿಗಳು ಬಂದಿದ್ದು, ಕಾರ್ಯಭಾರಕ್ಕೆ ತಕ್ಕಂತೆ ಇನ್ನೊಂದು ತಿಂಗಳೊಳಗೆ ಆದೇಶ ಪತ್ರ ನೀಡಲಾಗುವುದು. ಸಮಿತಿ ನೀಡಿರುವ ವರದಿ ಆಧಾರದ ಮೇಲೆ ಅತಿಥಿ ಉಪನ್ಯಾಸಕರ ವೇತನ ಪರಿಷ್ಕರಿಸಲಾಗಿದೆ.
ಎಷ್ಟು ಮಂದಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಬೇಕೆಂಬ ಬಗ್ಗೆ ಎರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಇ-ಆಡಳಿತ ಕೇಂದ್ರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ , ವಿವಿಧ ವಿವಿಗಳ ಕುಲಪತಿಗಳು ಉಪಸ್ಥಿತರಿದ್ದರು.
