ಬೆಂಗಳೂರು, ಫೆ.9- ಈಗಲ್ಟನ್ ರೆಸಾರ್ಟ್‍ನಲ್ಲಿರುವ ವಿಲ್ಲಾದಲ್ಲಿ ವಾಸವಾಗಿದ್ದ ನಿವೃತ್ತ ವಿಂಗ್ ಕಮಾಂಡರ್ ಹಾಗೂ ಅವರ ಪತ್ನಿಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಹಂತಕನನ್ನು ಬಿಡದಿ ಠಾಣೆ ಪೊಲೀಸರು ಕೇವಲ ಆರು ಗಂಟೆ ಅವಯೊಳಗೆ ಬಂಧಿಸಿದ್ದಾರೆ. ಬಿಹಾರ ಮೂಲದ ಜೋಗಿಂದರ್ ಕುಮಾರ್ ಯಾದವ್ (21) ಬಂತ ಆರೋಪಿ.
ನಿವೃತ್ತ ವಿಂಗ್ ಕಮಾಂಡರ್ ರಘುರಾಮ್ ರಾಜನ್ (65) ಮತ್ತು ಆಶಾ ರಾಜನ್ (60) ಅವರ ಮನೆಯಲ್ಲಿ ಆರೋಪಿ ಜೋಗಿಂದರ್ ಮನೆಕೆಲಸ ಮಾಡಿಕೊಂಡಿದ್ದು, ನಾಯಿಯನ್ನು ನೋಡಿಕೊಳ್ಳುತ್ತಿದ್ದನು. ಮಂಗಳವಾರ ಮುಂಜಾನೆ 2 ಗಂಟೆ ಸುಮಾರಿನಲ್ಲಿ ಜೋಗಿಂದರ್ ಮತ್ತು ಆತನ ಸಹಚರ ರವಿಕುಮಾರ್ ಯಾದವ್ ಮನೆಗೆ ನುಗ್ಗಿ ಸುತ್ತಿಗೆಯಿಂದ ರಘುರಾಮ್ ಮತ್ತು ಅವರ ಪತ್ನಿ ಆಶಾ ಅವರ ತಲೆಗೆ ಹೊಡೆದು ಕೊಲೆ ಮಾಡಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಈ ಬಗ್ಗೆ ಈಗಲ್ಟನ್ ರೆಸಾರ್ಟ್‍ನ ಸೆಕ್ಯೂರಿಟಿ ಗಾರ್ಡ್ ಕಮಲ್ ಎಂಬುವವರು ಬಿಡದಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ರಾಮನಗರ ಜಿಲ್ಲಾ ಎಸ್‍ಪಿ ಸಂತೋಷ್‍ಬಾಬು ಮಾರ್ಗದರ್ಶನದಲ್ಲಿ ಉಪವಿಭಾಗದ ಡಿವೈಎಸ್‍ಪಿ ಮೋಹನ್‍ಕುಮಾರ್ ಸೂಚನೆಯಂತೆ ಇನ್ಸ್‍ಪೆಕ್ಟರ್‍ಗಳಾದ ಪ್ರಕಾಶ್, ಮಲ್ಲೇಶ್ ಹಾಗೂ ಸಬ್‍ಇನ್ಸ್‍ಪೆಕ್ಟರ್‍ಗಳಾದ ಹೇಮಂತ್, ಅನಂತರಾಮು ಅವರೊಂದಿಗೆ ಪ್ರತ್ಯೇಕ ತನಿಖಾ ತಂಡ ರಚಿಸಿದ್ದರು.
ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡ ಪೊಲೀಸರು ಕೃತ್ಯ ನಡೆದ 6 ಗಂಟೆಯೊಳಗೆ ಕ್ಷಿಪ್ರಗತಿಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಬ್ಬ ಆರೋಪಿ ರವಿಕುಮಾರ್ ಪತ್ತೆಗೆ ತನಿಖೆ ಮುಂದುವರೆದಿದ್ದು, ಆದಷ್ಟು ಬೇಗ ಪತ್ತೆಮಾಡಿ ಬಂಧಿಸಲಾಗುವುದು ಎಂದು ಎಸ್‍ಪಿ ಸಂತೋಷ್‍ಬಾಬು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
