ನವದೆಹಲಿ, ಫೆ.5- ಆಫ್ಘಾನಿಸ್ತಾನ ಮತ್ತು ತಜಿಕಿಸ್ತಾನದಲ್ಲಿ ರಿಕ್ಟರ್ ಮಾಪಕ 5.7 ಪರಿಮಾಣದಲ್ಲಿ ದಾಖಲಾಗಿರುವ ಭಾರೀ ಭೂಕಂಪನವೊಂದು ಸಂಭವಿಸಿದ್ದು, ಈವರೆಗೆ ಯಾವುದೇ ಜೀವ ಮತ್ತು ಆಸ್ತಿ ಹಾನಿಯ ವರದಿಯಾಗಿಲ್ಲ. ಭಾರತದ ಭೂ ಭಾಗದ ಮೇಲೂ ಈ ಕಂಪನ ಪರಿಣಾಮ ಬೀರಿದ್ದು ಆತಂಕ ಮನೆ ಮಾಡಿದೆ.
ಇಂದು ಬೆಳಗ್ಗೆ 9.18ರ ಸುಮಾರಿಗೆ ಭೂ ಕಂಪನ ಸಂಭವಿಸಿದೆ. 181 ಕಿಲೋ ಮೀಟರ್ ಆಳದವರೆಗೂ ಭೂ ಕಂಪಿಸಿದೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.ಇನ್ನೊಂದೆಡೆ ಆಗ್ನೇಯ ಭಾರತದ ರಿಡ್ಜ್‍ನಲ್ಲಿ 6.1 ಭೂ ಕಂಪನವಾರಿಗೆ ಎಮದು ಅಮೇರಿಕಾದ ಭೂ ವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಕಾಶ್ಮೀರದಲ್ಲಿ ಭೂಕಂಪ: ಆಫ್ಘಾನಿಸ್ತಾನ ಮತ್ತು ತಜಕಿಸ್ತಾನದ ಭೂಕಂಪನದ ಪರಿಣಾಮ ಭಾರತದ ಗಡಿಭಾಗ ಜಮ್ಮು-ಕಾಶ್ಮೀರ ಸೇರಿದಂತೆ ಉತ್ತರ ಪ್ರದೇಶದ ನೋಯ್ಡಾವರೆಗೂ ಕಂಪನದ ಅನುಭವವಾಗಿದೆ. ರಾಜಧಾನಿ ದೆಹಲಿಯವರೆಗೂ ಒಂದಷ್ಟು ಭೂಮಿ ನಡುಗಿದೆ ಎಂದು ಭೂಕಂಪನ ಶಾಸ್ತ್ರ ಕೇಂದ್ರ ತಿಳಿಸಿದೆ.
ಭೂಕಂಪವು 36.34 ಡಿಗ್ರಿ ಅಕ್ಷಾಂಶಗಳಷ್ಟು ಉತ್ತರಕ್ಕೆ ಮತ್ತು 71.05 ಡಿಗ್ರಿ ರೇಖಾಂಶಗಳಷ್ಟು ಪೂರ್ವಕ್ಕೆ 181ಕಿ.ಮೀ. ಆಳದಲ್ಲಿ ಸಂಭವಿಸಿದೆ ಎಂದು ಅಕಾರಿಗಳು ವಿವರಿಸಿದ್ದಾರೆ. ಭೂಕಂಪನದಿಂದ ಭಯಭೀತರಾದ ಜನತೆ ಮನೆಗಳಿಂದ ಹೊರಗೆ ಓಡಿಬಂದರು. ಹೀಗಿದ್ದರೂ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿಗಳಿಗೆ ಹಾನಿಯಾದ ಬಗ್ಗೆ ವರದಿಗಳಿಲ್ಲ ಎಂದು ಅವರು ನುಡಿದಿದ್ದಾರೆ.
ದೆಹಲಿ, ನೊಯ್ಡಾ ಮತ್ತು ಸುತ್ತಮುತ್ತಲ ಸ್ಥಳಗಳಲ್ಲಿ ಸಹ ಭೂಮಿ ಕಂಪಿಸಿದ ಅನುಭವಗಳಾಗಿವೆ. ಉತ್ತರ ಪ್ರದೇಶದ ನೋಯ್ಡಾದ ಕೆಲವು ನಿವಾಸಿಗಳು ಕನಿಷ್ಠ ಪಕ್ಷ 20 ರಿಂದ 30 ಸೆಕೆಂಡ್‍ಗಳ ಕಾಲ ನೆಲ ನಡುಗಿತು ಎಂದು ಟ್ವಿಟ್ ಮಾಡಿದ್ದಾರೆ. ದೆಹಲಿಯ ಜನತೆ ಕೂಡ ಭೂಮಿ ನಡುಗಿದ ಅನುಭವ ಆಗಿದ್ದಾಗಿ ಟ್ವೀಟ್ ಮಾಡಿದ್ದಾರೆ.
ನಾನು ಫ್ಯಾನ್‍ನತ್ತ ದೃಷ್ಟಿಸಿದ ಕೂಡಲೇ ನನ್ನ ತಲೆ ತಿರುಗುತ್ತಿರುವಂತೆ ಅನ್ನಿಸಿತು ಮತ್ತು ಕಣ್ಣುಗಳು ಮುಚ್ಚಿಕೊಳ್ಳಲಾರಂಭಿಸಿದವು. ಆಗ ಇದು ಭೂಕಂಪ ಎಂಬುದರ ಅರಿವಾಯಿತು. ನೋಯ್ಡಾದಲ್ಲಿ ಸುಮಾರು 25-30 ಸೆಕೆಂಡ್‍ಗಳ ಕಾಲ ಪ್ರಬಲ ಕಂಪನಗಳುಂಟಾದವು ಎಂದು ದೆಹಲಿಯ ನಿವಾಸಿ ಶಶಾಂಗ್‍ಸಿಂಗ್ ಟ್ವಿಟ್ ಮೂಲಕ ವಿವರಿಸಿದ್ದಾರೆ.
