ಬೆಂಗಳೂರು,ಜು.10- ನಿರಂತರ ಮಳೆಯ ನಡುವೆ ಕೊಡಗು ಮತ್ತು ದಕ್ಷಿಣಕನ್ನಡದಲ್ಲಿ ಮತ್ತೆ ಭೂಕಂಪನವಾಗಿದೆ. ಮಡಿಕೇರಿಯ ಕರಕೆ, ಗೂನಡ್ಕ ಭಾಗದಲ್ಲಿ ಬೆಳಗ್ಗೆ ಭೂಮಿ ಕಂಪಿಸಿದ್ದು, ಜನರಲ್ಲಿ ಆತಂಕ ಉಂಟು ಮಾಡಿದೆ.
ದಕ್ಷಿಣ ಕನ್ನಡದ ಸುಳ್ಯ ತಾಲ್ಲೂಕಿನ ಚೆಂಬು, ಸಂಪಾಜೆ ಭಾಗಗಳಲ್ಲಿ ಇಂದು ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಭಾರೀ ಶಬ್ದ ಉಂಟಾಗಿದ್ದು, ಜನ ಭೀತಿಗೊಳಗಾಗಿದ್ದಾರೆ. ಆತಂಕದಲ್ಲಿ ದಿನದೂಡುವಂತಾಗಿದೆ.ಈ ಮಳೆಗಾಲದಲ್ಲಿ ಈ ಭಾಗಗಳಲ್ಲಿ ಸಂಭವಿಸಿದ 10ನೇ ಬಾರಿ ಭೂಕಂಪ ಇದಾಗಿದೆ.
2018ರಲ್ಲಿ ಇದೇ ರೀತಿ ಭೂಮಿ ಕಂಪಿಸಿ ಗುಡ್ಡ ಕುಸಿತ ಉಂಟಾಗಿ ಭಾರೀ ಪ್ರಮಾಣದ ಸಾವುನೋವು ಸಂಭವಿಸಿತ್ತು. ಈಗ ಮತ್ತೆ ಭಾರೀ ಶಬ್ದ ಮತ್ತು ನಿರಂತರ ಭೂಕಂಪನವಾಗುತ್ತಿರುವುದರಿಂದ ಜನ ಭೀತಿಗೊಳಗಾಗಿದ್ದಾರೆ.ಇಂದು ಬೆಳಗ್ಗೆ 6.24ರ ಸುಮಾರಿನಲ್ಲಿ ಭೂಮಿ ಕಂಪಿಸಿದೆ. ಭೂಕಂಪನದಿಂದ ಕೊಡುಗು, ದಕ್ಷಿಣಕನ್ನಡದ ಜನತೆ ತತ್ತರಗೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಹಲವೆಡೆ ಭೂಕಂಪನದ ಅನುಭವವಾಗಿದೆ. ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ್ದು, ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಬೆಳಗ್ಗೆ 6 ಗಂಟೆ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನಿನ್ನೆಯಷ್ಟೇ ವಿಜಯಪುರ, ಬೆಳಗಾವಿ ಜಿಲ್ಲೆಯ ಹಲವೆಡೆ ಭೂಕಂಪನವಾಗಿತ್ತು. ಈಗ ಕೊಡಗು, ದಕ್ಷಿಣ ಕನ್ನಡದಲ್ಲಿ ಮತ್ತೆ ಭೂಕಂಪನವಾಗಿರುವುದು ಜನರನ್ನು ಆತಂಕಕ್ಕೆ ದೂಡಿದೆ.
ಸೊರಬದಲ್ಲಿ ವರದಾ, ದಂಡಾವತಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹಲವು ಗ್ರಾಮಗಳು ದ್ವೀಪಗಳಾಗಿ ಪರಿವರ್ತನೆಗೊಂಡಿವೆ.