ಕಠ್ಮಂಡು,ಜು.31- ನೆರೆ ರಾಷ್ಟ್ರ ನೇಪಾಳದ ಕಠ್ಮುಂಡುವಿನಲ್ಲಿ ಪ್ರಬಲ ಭೂಕಂಪ ಉಂಟಾಗಿದೆ. ಬೆಳಗಿನ ಜಾವ 6.07ರ ಸುಮಾರಿಗೆ ರಿಕ್ಟರ್ ಮಾಪನದಲ್ಲಿ 6.0ರಷ್ಟು ಕಂಪನದ ತೀವ್ರತೆ ದಾಖಲಾಗಿದೆ. ಕಠ್ಮಂಡುವಿನ ಪೂರ್ವ ಆಗ್ನೇಯಕ್ಕೆ 147 ಕಿ.ಮೀ ದೂರದಲ್ಲಿನ ದಿತುಂಗ್‍ನಲ್ಲಿ ಬೆಳಗಿನ ಜಾವ ಭೂಕಂಪನ ಸಂಭವಿಸಿದೆ ಎಂದು ಭೂಕಂಪನ ಶಾಸ್ತ್ರದ ರಾಷ್ಟ್ರೀಯ ಕೇಂದ್ರ ಇಲಾಖೆ ಮಾಹಿತಿ ನೀಡಿದೆ.
ಈ ಪ್ರದೇಶದಲ್ಲಿ ಪ್ರಬಲ ಭೂಕಂಪನ ಸಂಭವಿಸಿರುವುದರಿಂದ ಬೆಳಗ್ಗೆ 8 ಗಂಟೆಗೆ ವೇಳೆಗೆ ಬಿಹಾರದ ಸೀತಮರ್ಹಿ, ಮುಜಾಫರ್‍ಪುರ್ ಮತ್ತು ಬಾಗಲಪುರದಲ್ಲಿಯೂ ಕಂಪನದ ಅನುಭವವಾಗಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.
ಪ್ರಬಲ ಭೂಕಂಪನ ಸಂಭವಿಸಿರುವ ನೇಪಾಳದ ದಿತುಂಗ್ ಭಾರತದ ಮುಜಾಫರ್‍ಪುರ್‍ನಿಂದ ಈಶಾನ್ಯಕ್ಕೆ 170 ಕಿ.ಮೀ ದೂರದಲ್ಲಿದೆ. ಅಲ್ಲಿ ಕಂಪನದಿಂದ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಕಳೆದ 2015 ಏಪ್ರಿಲ್ 25ರಂದು ಕಠ್ಮಂಡು ಮತ್ತು ಪೋಕ್ರಾನ್ ನಗರದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿತ್ತು. ಈ ಸಂದರ್ಭದಲ್ಲಿ 8,964 ಮಂದಿ ಸಾವನ್ನಪ್ಪಿ 22 ಸಾವಿರ ಮಂದಿ ಗಾಯಗೊಂಡಿದ್ದರು. ಅನೇಕ ಮನೆ, ಕಟ್ಟಡಗಳು ನೆಲಸಮಗೊಂಡಿದ್ದವು.