ಹೊಸ ತಂತ್ರಜ್ಞಾನದ ಮೂಲಕ ಕಡಲ್ಕೊರೆತ ನಿಯಂತ್ರಣಕ್ಕೆ ತೀರ್ಮಾನ : ಸಿಎಂ

Social Share

ಉಡುಪಿ,ಜು.13- ಹೊಸ ತಂತ್ರಜ್ಞಾನದ ಮೂಲಕ ಕಡಲ್ಕೊರೆತ ನಿಯಂತ್ರಣಕ್ಕೆ ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು, ದಕ್ಷಿಣ ಕನ್ನಡ ಭಾಗಗಳಲ್ಲಿ ಭೂ ಕುಸಿತ, ಭೂ ಕಂಪನಕ್ಕೆ ಸಂಬಂಧಿಸಿದಂತ ನಾಲ್ಕು ಸಂಸ್ಥೆಗಳ ಮೂಲಕ ಅಧ್ಯಯನಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕಡಲ್ಕೊರೆತಕ್ಕೆ ಸಂಬಂಧಿಸಿದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು. ಕರಾವಳಿಯ ಮೂರು ಜಿಲ್ಲೆಗಳ ಕಡಲ್ಕೊರೆತ, ಮಳೆಹಾನಿ, ಪ್ರವಾಹ ಪರಿಸ್ಥಿತಿ ಸಹಿತ ವಿವಿಧ ವಿಷಯಗಳ ಕುರಿತು ಅಧಿಕಾರಿಗಳ ಜತೆ ಸಮಗ್ರ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ಸಚಿವರಾದ ಕೋಟ ಶ್ರೀವಾಸ ಪೂಜಾರಿ, ಎಸ್. ಅಂಗಾರ, ಆರ್. ಅಶೋಕ್, ಸಿ.ಸಿ.ಪಾಟೀಲ್, ಶಾಸಕರಾದ ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಉ.ಕನ್ನಡ ಜಿಲ್ಲಾ ಪ್ರವಾಸ ರದ್ದು: ಉತ್ತರಕನ್ನಡ ಜಿಲ್ಲೆಯ ಮಳೆ ಹಾನಿಯನ್ನು ವೀಕ್ಷಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಭೇಟಿ ನೀಡಬೇಕಾಗಿತ್ತು. ಆದರೆ ಬೆಂಗಳೂರಿಗೆ ತುರ್ತಾಗಿ ಬರಬೇಕಾಗಿರುವ ಕಾರಣ ಅವರು ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ಇಂದು ಜಿಲ್ಲೆಯ ಭಟ್ಕಳ ತಾಲೂಕಿನ ಗೊರಟೆ ಗ್ರಾಮದಲ್ಲಿ ಕಡಲ ಕೊರೆತದಿಂದಾಗಿರುವ ಹಾನಿಯನ್ನು ವೀಕ್ಷಿಸಲು ಸಮಯ ನಿಗದಿಯಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಇದನ್ನು ರದ್ದುಪಡಿಸಿದ್ದಾರೆ. ಪ್ರವಾಹ ಪೀಡಿತ ಉಡುಪಿ ಜಿಲ್ಲೆಗೆ ಮಾತ್ರ ಭೇಟಿ ನೀಡಿ ಮಳೆಯಿಂದ ಉಂಟಾದ ಹಾನಿಯನ್ನು ವೀಕ್ಷಣೆ ಮಾಡಲಿದ್ದಾರೆ. ನಂತರ ಉಡುಪಿಯಲ್ಲಿ ಕರಾವಳಿ ಭಾಗದ ಅಧಿಕಾರಿಗಳೊಂದಿಗೆ ಪ್ರವಾಹ ಹಾನಿ ಕುರಿತು ಸಭೆಯನ್ನು ನಡೆಸಲಿದ್ದಾರೆ. ಆದರೆ, ಮುಂದಿನ 10 ದಿನಗಳ ಒಳಗೆ ಭಟ್ಕಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಈಗಾಗಲೇ ಮಳೆಯ ಅಬ್ಬರಕ್ಕೆ ಉತ್ತರಕನ್ನಡ ಜಿಲ್ಲೆ ತತ್ತರಿಸಿ ಹೋಗಿದೆ. ಜಿಲ್ಲೆಯಲ್ಲಿ ಮಳೆಯಿಂದ 127 ಕೋಟಿ ನಷ್ಟವಾಗಿದೆ. ನಿರಂತರ ಮಳೆಗೆ ಕಡಲ ಕೊರೆತ, ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿ ಮನೆಗಳಿಗೆ ನೀರು ನುಗ್ಗಿ ಅನಾಹುತವಾಗಿದೆ.
ಜೋಯಿಡಾ ಭಾಗದಲ್ಲಿ ನಿರಂತರ ಗುಡ್ಡ ಕುಸಿತವಾಗುತ್ತಿದ್ದು, ರಾಜ್ಯ ಹೆದ್ದಾರಿ ಸಂಚಾರವನ್ನು ಬಂದ್ ಮಾಡಲಾಗಿದೆ. ಇನ್ನು ಜಿಲ್ಲೆಯ ಕಾಳಿ, ವರದಾ, ಅಘನಾಶಿನಿ, ಗಂಗಾವಳಿ, ಶರಾವತಿ ನದಿ ಅಪಾಯದ ಮಟ್ಟ ಹರಿದು ತೀರ ಪ್ರದೇಶಗಳ ಗ್ರಾಮಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಜಿಲ್ಲೆಯಲ್ಲಿ ಸುರಿದ ಅಬ್ಬರದ ಮಳೆ ಹಳಿಯಾಳದಲ್ಲಿ ಮೂರು ಜೀವಗಳನ್ನು ಬಲಿ ಪಡೆದಿದೆ. ಮಳೆಯ ಅಬ್ಬರಕ್ಕೆ 273 ಮನೆಗಳಿಗೆ ಹಾನಿಯಾಗಿದ್ದು, 698 ಜನರು ತೊಂದರೆಗೊಳಗಾಗಿದ್ದು, 209 ಜನ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

124 ಶಾಲೆಗಳು, 147 ಅಂಗನವಾಡಿ ಕೇಂದ್ರ ಹಾನಿಗೊಳಗಾಗಿದ್ದು, ಜಿಲ್ಲೆಯ ಒಟ್ಟು 499.51 ಕಿಮೀ ರಸ್ತೆಗಳು ಹಾನಿಯಾಗಿದ್ದು, 71 ಸೇತುವೆ ಹಾನಿಯಾಗಿದೆ. 1779 ವಿದ್ಯುತ್ ಕಂಬಗಳು, 18.51 ಲೈನುಗಳು, 77 ಟ್ರಾನ್ಸ್‍ಫಾರ್ಮಗಳು ಹಾನಿಯಾಗಿದ್ದು, 0.42 ಹೆಕ್ಟೇರ್ ತೋಟಗಾರಿಕಾ ಬೆಳೆ ನಷ್ಟವಾಗಿದೆ.

Articles You Might Like

Share This Article