ಚೀನಾ-ಪಾಕ್‍ಗಿಂತಲೂ ಭಾರತೀಯ ಯೋಧರನ್ನು ಹೆಚ್ಚು ಕಾಡುತ್ತಿದೆ ಈ ಸಮಸ್ಯೆ..!

ನವದೆಹಲಿ,ಡಿ.3- ಭಾರತ-ಚೀನಾ ಗಡಿ ಭಾಗವಾಗಿರುವ ಪೂರ್ವಲಡಾಕ್ ಮತ್ತು ಶಿಯಾಚಿನ್ ಪ್ರದೇಶಗಳಲ್ಲಿ ಶತೃ ರಾಷ್ಟ್ರಗಳ ದಾಳಿಯ ಭಯಕ್ಕಿಂತಲೂ ಶೀತ ವಾತಾವರಣದ ಅಪಾಯಗಳು ತೀವ್ರಗೊಳ್ಳುತ್ತಿವೆ. ಮಾರಣಾಂತಿಕವಾದ ಶೀತ ವಾತಾವರಣದಿಂದ ಸೈನಿಕರನ್ನು ಕಾಪಾಡಲು ಕೇಂದ್ರ ಸರ್ಕಾರ ನಾನಾ ರೀತಿಯ ಮುಂಜಾಗೃತಾ ಕ್ರಮಗಳನ್ನ ಕೈಗೊಂಡಿದೆ.

ಸೈನಿಕರ ನಿಯೋಜನೆಯನ್ನು ಕಾಲಕಾಲಕ್ಕೆ ಬದಲಾವಣೆ ಮಾಡಲಾಗುತ್ತಿದೆ. ಜತೆಗೆ ಪ್ರತ್ಯೇಕ ವೈದ್ಯಕೀಯ ತಂಡವನ್ನು ನಿಯೋಜನೆ ಮಾಡಿ ದಿನದ 24 ಗಂಟೆಯೂ ವೈದ್ಯಕೀಯ ಸೇವೆ ದೊರೆಯುವಂತೆ ಮಾಡಲಾಗಿದೆ ಹಾಗೂ ಸೈನಿಕರು ಸದೃಢ ಆರೋಗ್ಯ ಕಾಯ್ದುಕೊಂಡು ಶತೃಗಳೊಂದಿಗೆ ಹೋರಾಟಲು ಅನುಕೂಲವಾಗುವಂತೆ ಉತ್ಕøಷ್ಟ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಪೂರ್ವ ಲಡಾಕ್‍ನಲ್ಲಿ ಸಣ್ಣ ಪ್ರಮಾಣದ ಹಿಮಪಾತವಾಗುತ್ತಿದೆ. ಅಲ್ಲಿ ಶೀತ ವಾತಾವರಣ ಶೂನ್ಯ ಡಿಗ್ರಿಗಿಂತಲೂ ಕೆಳಭಾಗದಲ್ಲಿದೆ. ದಿನದಿಂದ ದಿನಕ್ಕೆ ಅದು -30ಡಿಗ್ರಿವರೆಗೂ ತಲುಪುವ ಆತಂಕವಿದೆ. ಈ ವಾತಾವರಣದಲ್ಲಿ ಮನುಷ್ಯರ ರಕ್ತನಾಳಗಳು ಹೆಪ್ಪುಗಟ್ಟುವ ಸಾಧ್ಯತೆ ಇದೆ. ಹೃದಯಾಘಾತ, ಉಸಿರಾಟದ ತೊಂದರೆ, ಚರ್ಮರೋಗಗಳು ಸೇರಿದಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಶಿಯಾಚಿನ್ ಮತ್ತು ಲಡಾಕ್ ಪ್ರದೇಶಗಳು ಸಮುದ್ರ ಮಟ್ಟದಿಂದ ಸರಿಸುಮಾರು 8ರಿಂದ 12 ಸಾವಿರ ಅಡಿ ಎತ್ತರದಲ್ಲಿರುವುದರಿಂದ ಶೀತ ವಾತಾವರಣದ ಜತೆ ಆಮ್ಲಜನಕದ ಕೊರತೆಯನ್ನೂ ಎದುರಿಸುತ್ತಿರುತ್ತವೆ. ಹೀಗಾಗಿ ಮೆಲ್ಭಾಗಕ್ಕೆ ಹೋದಂತೆಲ್ಲಾ ಉಸಿರಾಟವು ಕೂಡ ಕಷ್ಟವಾಗುವ ಸಾಧ್ಯತೆ ಇದೆ ಎಂದು ನಿವೃತ್ತ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.

ಇತ್ತೀಚೆಗೆ ಚೀನಾ ಗಡಿ ಭಾಗದಲ್ಲಿ ತಂಟೆಕೋರತನ ಮಾಡಿ ನೆಮ್ಮದಿ ವಾತಾವರಣವನ್ನು ಕದಡಿದೆ. ಹೀಗಾಗಿ ಯಾವುದೇ ಕ್ಷಣದಲ್ಲೂ ಮೈ ಮರೆಯಲು ಅವಕಾಶವಿಲ್ಲ. ಡಿಸೆಂಬರ್ ಹಾಗೂ ಜನವರಿ ತಿಂಗಳು ಗಡಿ ಭಾಗದಲ್ಲಿರುವ ಸೈನಿಕರಿಗೆ ಸವಾಲಿನ ದಿನಗಳು. ಎದುರುಗಡೆಯಿಂದ ನುಗ್ಗುವ ಶತೃಗಳ ಎದೆಗೆ ಗುರಿಯಿಡುವ ಜತೆಗೆ ಪ್ರಕೃತಿಯ ವೈರುದ್ಯದ ಜತೆಗೆ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ.

ಈ ಮೊದಲಿನಿಂದಲೂ ಶಿಯಾಚಿನ್ ಮತ್ತು ಪೂರ್ವ ಲಡಾಕ್ ನಂತಹ ದುರ್ಘಮ ಪ್ರದೇಶದಲ್ಲಿ ಭಾರತ ತನ್ನ ಸೇನೆಯನ್ನು ನಿಯೋಜನೆ ಮಾಡಿ ಸುಕರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಬಾರಿ ಅಲ್ಲಿ ಶೀತ ವಾತಾವರಣ ಮತ್ತಷ್ಟು ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಗಡಿ ಭಾಗದ ಸೈನಿಕರಿಗೆ ದಿನದ 24 ಗಂಟೆಯೂ ಲಭ್ಯವಾಗುವಂತಹ ಆರೋಗ್ಯ ಸೇವೆ ಒದಗಿಸಲು ಮುಂದಾಗಿದೆ.

ಒಬ್ಬರು ವೈದ್ಯರು, ನಾಲ್ಕೈದು ಮಂದಿ ನರ್ಸ್‍ಗಳ ತಂಡ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಪ್ರತಿ ಟ್ರಿಪ್‍ಗೂ ಪ್ರತ್ಯೇಕ ವೈದ್ಯಕೀಯ ತಂಡವನ್ನು ನಿಯೋಜಿಸಲಾಗಿದೆ. ತುರ್ತುಸಂದರ್ಭಗಳಲ್ಲಿ ಸೈನಿಕರನ್ನು ಸಾಗಾಣಿಕೆ ಮಾಡಲು ಹೆಲಿಕಾಫ್ಟರ್‍ಗಳನ್ನು ಸಿದ್ದವಾಗಿಡಲಾಗಿದೆ. ಲೇಹ್‍ನಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗಡಿ ಭಾಗದ ಸೈನಿಕರಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಈ ಮೊದಲೆಲ್ಲಾ ಈ ಪ್ರದೇಶಕ್ಕೆ ಒಮ್ಮೆ ವರ್ಗಾವಣೆಯಾದರೆ ಅಲ್ಲಿ ಎರಡು ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕಿತ್ತು.

ವಿಷಮ ಪರಿಸ್ಥಿತಿ ಎದುರಾಗಿರುವುದರಿಂದಾಗಿ 3ತಿಂಗಳು, 6 ತಿಂಗಳಿಗೊಮ್ಮೆ ಸೈನಿಕರನ್ನು ಬದಲಾವಣೆ ಮಾಡಲಾಗುತ್ತಿದೆ ಮತ್ತು ಮೆಚ್ಚನೆಯ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ವಿಶ್ರಾಂತಿ ಅವಧಿಯಲ್ಲಿ ಈ ಮನೆಗಳಲ್ಲಿ ತಂಗುವ ಮೂಲಕ ಸೈನಿಕರು ತಮ್ಮ ದೇಹದ ಉಷ್ಣಾಂಶವನ್ನು ಕಾಪಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಕೇವಲ ಭಾರತ ಸೈನಿಕರು ಮಾತ್ರ ಈ ಪರಿಸ್ಥಿತಿ ಎದುರಿಸುತ್ತಿಲ್ಲ. ಚೀನಾ ಭಾಗದಲ್ಲೂ ಇದೇ ರೀತಿಯ ವಾತಾವರಣವಿದ್ದು, ಚೀನಾ ಸೈನಿಕರ ಸ್ಥಿತಿಯೂ ಇದೇ ಆಗಿದೆ.
ಸದ್ಯಕ್ಕೆ ಸೇನಾ ಮುಖ್ಯಸ್ಥರು ಗಡಿ ಭಾಗದಲ್ಲಿ ಕೆಲಸ ಮಾಡುವ ಯೋಧರ ಜೀವ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.