ಗುಜರಾತ್ ವಿಧಾನಸಭೆ ಚುನಾವಣೆಗೆ ಮಹೂರ್ತ ಫಿಕ್ಸ್, 2 ಹಂತದಲ್ಲಿ ಮತದಾನ

Social Share

ನವದೆಹಲಿ, ನ.3- ದೇಶದ ಗಮನ ಸೆಳೆದ ಗುಜರಾತ್ ವಿಧಾನಸಭೆಗೆ ಕೇಂದ್ರ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದ್ದು, ಡಿಸೆಂಬರ್ 1 ಮತ್ತು 5ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 8ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದ್ದಾರೆ. ಪ್ರಕಟಿತ ವೇಳಾಪಟ್ಟಿಯ ಪ್ರಕಾರ 89 ಕ್ಷೇತ್ರಗಳಿಗೆ ಡಿಸೆಂಬರ್ 1ರಂದು, ಉಳಿದ 93 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಚುನಾವಣೆ ನಡೆಯಲಿದೆ.

ಇತ್ತೀಚೆಗೆ ಮೊರ್ಬಿಯಲ್ಲಿ ನಡೆದ ತೂಗು ಸೇತುವೆ ದುರಂತದಲ್ಲಿ ಮೃತಪಟ್ಟ 135 ಮಂದಿಗೆ ಮುಖ್ಯ ಆಯುಕ್ತರು ಶ್ರದ್ಧಾಂಜಲಿ ಸಲ್ಲಿಸಿ, ನಂತರ ಮಾಹಿತಿ ನೀಡುವುದನ್ನು ಮುಂದುವರೆಸಿದರು.

ಒಟ್ಟು 182 ವಿಧಾನಸಭಾ ಕ್ಷೇತ್ರಗಳಲ್ಲಿ 142 ಸಾಮಾನ್ಯ ಕ್ಷೇತ್ರಗಳಾಗಿವೆ, 17 ಪರಿಶಿಷ್ಟ ಜಾತಿ, 23 ಪರಿಶಿಷ್ಟ ಪಂಗಡಕ್ಕೆ ಸೇರಿದ ಕ್ಷೇತ್ರಗಳಾಗಿವೆ. ಒಟ್ಟು 4.9 ಕೋಟಿ ಅರ್ಹ ಮತದಾರರನ್ನು ಗುರುತಿಸಲಾಗಿದೆ. ಅವರಲ್ಲಿ 4.6 ಲಕ್ಷ ಹೊಸ ಮತದಾರರಿದ್ದಾರೆ. ರಾಜ್ಯಾದ್ಯಂತ 51 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಅವುಗಳಲ್ಲಿ ಗ್ರಾಮೀಣ ಭಾಗದಲ್ಲಿ 34,276, 17506 ನಗರ ಪ್ರದೇಶದಲ್ಲಿರಲಿವೆ.

ಮಂಗಳಮುಖಿಯರಿಗೆ ಸರ್ಕಾರದಿಂದ ಜಮೀನು, ದೇಶದಲ್ಲೇ ಮೊದಲು

ಮೊದಲ ಹಂತದ ಚುನಾವಣೆಗೆ ನವೆಂಬರ್ 5ರಂದು ಅಸೂಚನೆ ಜಾರಿಗೆ ಬರಲಿದ್ದು, ನಾಮಪತ್ರ ಸಲ್ಲಿಕೆಗೆ ನವೆಂಬರ್ 14 ಕೊನೆಯ ದಿನವಾಗಿದೆ. 15ರಂದು ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನ.17 ಕೊನೆಯ ದಿನವಾಗಿದೆ. ಡಿಸೆಂಬರ್ 1ರಂದು ಚುನಾವಣೆ ನಡೆಯಲಿದೆ.

ಎರಡನೇ ಹಂತದ ಮತದಾನಕ್ಕೆ ನ.10ರಂದು ಅಸೂಚನೆ ಜಾರಿಯಾಗಿ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನ.17ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 18ರಂದು ಪರಿಶೀಲನೆ ನಡೆದು, ಹಿಂಪಡೆಯಲು ನ.21ರವರೆಗೂ ಕಾಲಾವಕಾಶ ನೀಡಲಾಗುವುದು. ಡಿಸೆಂಬರ್ 5ರಂದು ಮತದಾನ ನಡೆಯಲಿದೆ. ಎರಡು ಹಂತದ ಚುನಾವಣೆಯ ಮತ ಎಣಿಕೆ ಡಿಸೆಂಬರ್ 8ರಂದು ನಡೆದು ಫಲಿತಾಂಶ ಪ್ರಕಟವಾಗಲಿದೆ.

ಗುಜರಾತ್ ವಿಧಾನಸಭೆ ಚುನಾವಣೆ ದೇಶದ ಪ್ರತಿಷ್ಠಿತ ರಾಜಕೀಯ ಸಮರದಲ್ಲಿ ಒಂದಾಗಲಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ನೆಲವಾದ ಗುಜರಾತ್ ನಲ್ಲಿ ಸತತ ಐದು ಅವಯಿಂದ ಬಿಜೆಪಿ ಪಾರುಪತ್ಯ ಮುಂದುವರೆದಿದೆ. ಈ ಬಾರಿ ಅಮ್ ಆದ್ಮಿ ಪಕ್ಷ ಬಿಜೆಪಿಗೆ ಪೈಪೋಟಿ ನೀಡಲಾರಂಭಿಸಿದ್ದು, ಕಾಂಗ್ರೆಸ್ ಕೂಡ ಪ್ರಮುಖ ಸ್ಪರ್ಧೆಯೊಡ್ಡುತ್ತಿದೆ.

ಹೀಗಾಗಿ ತವರು ನೆಲದಲ್ಲಿ ಸತತ ಆರನೇ ಬಾರಿ ಗೆದ್ದು ದಿಗ್ವಿಜಯ ಮುಂದುವರೆಸುವುದು ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಶೇ.49.05ರಷ್ಟು ಮತಗಳನ್ನು ಪಡೆದು 99 ಕ್ಷೇತ್ರಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತ್ತು. ಕಾಂಗ್ರೆಸ್ ಶೇ.42.97ರಷ್ಟು ಮತಗಳನ್ನು ಪಡೆದು 77 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ವಿರೋಧ ಪಕ್ಷದ ಸ್ಥಾನದಲ್ಲಿ ಉಳಿದು ಕೊಂಡಿತ್ತು.

ಆನ್‍ಲೈನ್ ಕ್ಲಾಸ್ ಎಫೆಕ್ಟ್, ಮೊಬೈಲ್ ದಾಸರಾದ ಮಕ್ಕಳು, ಪೋಷಕರು ಕಂಗಾಲು

ಆದರೆ ಕಾಂಗ್ರೆಸ್‍ನಲ್ಲಿ ಸತತವಾದ ಭಿನ್ನಮತಗಳಿಂದಾಗಿ ಶಾಸಕರ ವಲಸೆ ಹೆಚ್ಚಾಗಿದ್ದು, ಬಿಜೆಪಿಯ ಸಂಖ್ಯಾಬಲ 111ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್ ಸಂಖ್ಯೆ 62ಕ್ಕೆ ಕುಸಿದಿದೆ. ದೆಹಲಿ, ಪಂಜಾಬ್‍ನಲ್ಲಿ ಗೆದ್ದು ಸ್ಪಷ್ಟ ಬಹುಮತದ ಮೂಲಕ ಅಕಾರಕ್ಕೆ ಬಂದಿರುವ ಅಮ್ ಆದ್ಮಿ ಈ ಬಾರಿ ಗುಜರಾತ್ ಚುನಾವಣಾ ಕಣಕ್ಕೆ ಪ್ರವೇಶ ಪಡೆದಿದೆ.

ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುಜರಾತ್‍ನಲ್ಲಿ ಸರಣಿ ಪ್ರವಾಸಗಳನ್ನು ಕೈಗೊಂಡು ಪ್ರಚಾರ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ನಿರಂತರ ಪ್ರವಾಸ ಕೈಗೊಂಡು ಹಲವು ಯೋಜನೆಗಳನ್ನು ಉದ್ಘಾಟಿಸಿದ್ದಾರೆ.

Articles You Might Like

Share This Article