ನವದೆಹಲಿ, ಆ. 8- ಭಾರತೀಯ ಚುನಾವಣಾ ಆಯೋಗ ಮತದಾರರ ಪಟ್ಟಿಯಲ್ಲಿನ ಗೊಂದಲ ಸರಿ ಪಡಿಸುವ ನಿಟ್ಟಿನಲ್ಲಿ ನಕಲಿ ಮತದಾರರನ್ನು ತೆಗೆದು ಹಾಕುವ ಪ್ರಕ್ರಿಯೆಯನ್ನು ದ್ವಿಗುಣಗೊಳಿಸಿದೆ. ಕಳೆದ ಏಳು ತಿಂಗಳುಗಳಲ್ಲಿ ಸುಮಾರು 1 ಕೋಟಿಗೂ ಹೆಚ್ಚು ನಕಲಿ ಮತದಾರರನ್ನು ತೆಗೆದುಹಾಕಲಾಗಿದೆ ಅಥವಾ ಸರಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುತಿನ ಚೀಟಿಯಲ್ಲಿನ ಭಾವಚಿತ್ರಗಳು ಮತ್ತು ಅದರಲ್ಲಿನ ವ್ಯತ್ಯಾಸಗಳನ್ನೆಲ್ಲಾ ಗುರುತಿಸಿ ಸರಿಪಡಿಸಲಾಗುತ್ತಿದೆ. ಆದಷ್ಟು ಸರಿಪಡಿಸಿ ಸಮಗ್ರವಾಗಿ ಮತದಾರರ ಮಾಹಿತಿಯನ್ನು ರೂಪಿಸಲು ಪ್ರಯತ್ನಿಸಲಾಗಿದೆ ಎಂದು ತಿಳಿಸಿದ್ದಾರೆ.
ನಕಲಿ ಎಂದು ಕಂಡು ಬರುವುದನ್ನು ತೆಗೆದು ಹಾಕಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು ಆಗಸ್ಟ್ 1ರಿಂದ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್‍ನ್ನು ಸ್ವಯಂ ಪ್ರೇರಿತವಾಗಿ ಲಿಂಕ್ ಮಾಡಲು ಇಸಿಐ ಅನುಮತಿ ನೀಡಿದೆ.
ಜನಸಂಖ್ಯಾಶಾಸ್ತ್ರೀಯವಾಗಿ ಒಂದೇ ರೀತಿಯ ನಮೂದುಗಳಿರುವ 1,191,191 ಗುರುತಿನ ಚೀಟಿಯನ್ನು ಗುರುತಿಸಲಾಗಿದೆ.
ಅದರಲ್ಲಿ ಸುಮಾರು 927,853 ಅನ್ನು ತೆಗೆದು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಯಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಮತಗಟ್ಟೆ ಹಾಗೂ ಮತದಾರರ ಪರಿಶೀಲನೆ ನಡೆಸಲಾಗುವುದು ಸ್ವಯಂ ಪ್ರೇರಿತವಾಗಿ ಯಾವುದೇ ನಮೂನೆಯನ್ನು ಅಳಿಸಲಾಗುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಲಾಗಿದೆ.
ಒಟ್ಟು 31,889,422 ಗುರುತಿನ ಚೀಟಿಯಲ್ಲಿ ಒಂದೇ ರೀತಿಯ ಭಾವಚಿತದ್ರ ನಮೂದುಗಳನ್ನು ಗುರುತಿಸಿದೆ ಮತ್ತು ಸುಮಾರು 20ಲಕ್ಷ ತಿದ್ದುಪಡಿ ಮಾಡಿ 9,800,412 ಅನ್ನು ಅಳಿಸಿದೆ. ಇದರ ಪರಿಶೀಲನೆ ಎರಡು ಹಂತಗಳಲ್ಲಿ ನಡೆದಿದೆ ಎಂದು ಹೇಳಿದ್ದಾರೆ.
ಸ್ವಯಂ ಪ್ರೇರಿತ ಆಧಾರ್ ಲಿಂಕ್ ಮಾಡುವುದರೊಂದಿಗೆ ಮತದಾರರ ಪಟ್ಟಿಯಲ್ಲಿನ ತಿದ್ದುಪಡಿಗಳು ಹೆಚ್ಚಿನ ವೇಗದಲ್ಲಿ ನಡೆಯುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ದೇಶದಲ್ಲಿ ಒಟ್ಟು 94 ಕೋಟಿ ಮತದಾರರು ನೊಂದಾಯಿಸಿಕೊಂಡಿದ್ದಾರೆ.