ನವದೆಹಲಿ,ಆ. 17 – ರಾ ರಾ ರಕ್ಕಮ್ಮ ಖ್ಯಾತಿಯ ನಟಿ ಜಾಕ್ವೆಲಿನ್ ಫರ್ನಾಂಡಿಸ್‍ರನ್ನು 215 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಆರೋಪಿ ಎಂದು ಪರಿಗಣಿಸಲು ಜಾರಿ ನಿರ್ದೇಶನಾಲಯ ನಿರ್ಧರಿಸಿದೆ. ದೆಹಲಿಯ ಪಿಎಂಎಲ್‍ಎ ಕೋರ್ಟ್‍ಗೆ ಹೆಚ್ಚುವರಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದ್ದು, ಅದರಲ್ಲಿ ಸುಖೇಶ್ ಚಂದ್ರಶೇಖರ್ ಮತ್ತು ಇತರರೊಂದಿಗೆ ಜಾಕ್ವೆಲಿನ್ ಫರ್ನಾಂಡಿಸ್‍ರನ್ನು ಆರೋಪಿ ಎಂದು ಪರಿಗಣಿಸಲಾಗಿದೆ.
ಶ್ರೀಲಂಕಾ ಪ್ರಜೆಯಾಗಿರುವ 36 ವರ್ಷದ ಜಾಕ್ವೆಲಿನ್ ಫರ್ನಾಂಡಿಸ್ 2009ರಿಂದಲೂ ಬಾಲಿವುಡ್‍ನಲ್ಲಿ ನಟಿಸಿ ಖ್ಯಾತಿಗಳಿಸಿದ್ದಾರೆ. ಇತ್ತೀಚೆಗೆ ಸುದೀಪ್ ನಟನೆಯ ಬಹುಭಾಷ ಚಿತ್ರ ವಿಕ್ರಾಂತ್ ರೋಣ ಚಿತ್ರದ ರಾ ರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿ ಜನಪ್ರಿಯತೆ ಗಳಿಸಿದ್ದರು. ಈಗ ಅವರನ್ನು ಸುಲಿಗೆ ಪ್ರಕರಣದಲ್ಲಿ ಆರೋಪಿಯಾಗಿರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಪ್ರಮುಖ ಆರೋಪಿ ಸುಖೇಶ್ ಚಂದ್ರಶೇಖರ್ ಪೋರ್ಟಿಸ್ ಹೆಲ್ತ್‍ಕೇರ್ ಪವರ್ತಕರಾದ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿಸಿಂಗ್ ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳನ್ನು ವಂಚಿಸಿ ಕೋಟ್ಯಂತರ ರೂ. ಸುಲಿಗೆ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಈ ರೀತಿ ವಸೂಲಿ ಮಾಡಲಾದ ಹಣದಲ್ಲಿ ಸುಖೇಶ್ ಚಂದ್ರಶೇಖರ್ ನಟಿ ಜಾಕ್ವೆಲಿನ್‍ಗೆ ಐಷಾರಾಮಿ ಉಡುಗೊರೆಗಳನ್ನು ನೀಡಿದ್ದಾರೆ. ಕಳೆದ ಏಪ್ರಿಲ್‍ನಲ್ಲಿ ಜಾಕ್ವೆಲಿನ್‍ಗೆ ಸೇರಿದ 7.27 ಕೋಟಿ ಮೊತ್ತದ ಸ್ಥಿರ ಚರಾಸ್ತಿಗಳನ್ನು ಪ್ರಾಸ್ತಾವಿತ ಜಪ್ತಿಗೆ ಜಾರಿ ನಿರ್ದೇಶನಾಲಯ ಗುರುತಿಸಿತು.
ಐದಿನೈದು ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಅಪರಾಧವನ್ನು ಮುಂದುವರೆಸಲು ಜಾಕ್ವೆಲಿನ್‍ಗೆ 5.71 ಕೋಟಿ ರೂ. ಉಡುಗೊರೆಗಳನ್ನು ನೀಡಿದ್ದರು. ಸಹ ಆರೋಪಿಯಾಗಿರುವ ಪಿಂಕಿ ಇರಾನಿ ಮೂಲಕ ಉಡುಗೊರೆಗಳನ್ನು ತಲುಪಿಸುತ್ತಿದ್ದರು. ಸುಮಾರು 1.3 ಕೋಟಿ ರೂ. ಮೌಲ್ಯದ 1,72,913 ಡಾಲರನ್ನು ಹೂಡಿಕೆಗಾಗಿ ನೀಡಿದ್ದರು. 14 ಲಕ್ಷ ರೂ. ಮೌಲ್ಯದ ಕಾರನ್ನು ಜಾಕ್ವೆಲಿನ್ ಅವರ ಸಬಂಧಿಕರಿಗೆ ನೀಡಲಾಗಿತ್ತು.
ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ಅವತಾರ್ ಸಿಂಗ್ ವಿದೇಶದಲ್ಲಿ ಅಕ್ರಮದ ಹಣದ ವಹಿವಾಟಿಗೆ ನೆರವು ನೀಡಿದ್ದರು ಎಂದು ದೂರಲಾಗಿದೆ. ಜತೆಗೆ ವೆಬ್‍ಸೀರಿಸ್ ಒಂದರ ಯೋಜನೆಗೆ ಕಥೆ ಬರೆಯಲು ಜಾಕ್ವೆಲಿನ್ ಪರವಾ ಸುಖೇಶ್ 15 ಲಕ್ಷ ರೂ.ಗಳ ಮುಂಗಡ ಹಣ ನೀಡಿದ್ದರ ದಾಖಲೆಗಳು ಪತ್ತೆಯಾಗಿವೆ.