ಬೆಂಗಳೂರು, ಅ.6- ಭಾರತ ಐಕ್ಯತಾ ಯಾತ್ರೆಯಲ್ಲಿ ಭಾಗವಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೊಂದು ತುರ್ತು ನೋಟಿಸ್ ನೀಡಿರುವ ಜಾರಿ ನಿರ್ದೇಶನಾಲಯ, ನಿಗದಿತ ಸಮಯದಂತೆ ನಾಳೆಯೇ ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಿದೆ.
ಯಂಗ್ ಇಂಡಿಯಾ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ವಿಚಾರಣೆಗೆ ಈ ಮೊದಲು ಸೆಪ್ಟಂಬರ್ 23ರಂದು ನೋಟಿಸ್ ನಿಡಿದ್ದ ಜಾರಿ ನಿರ್ದೇಶನಾಲಯ ಅಕ್ಟೋಬರ್ 7ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು. ರಾಹುಲ್ಗಾಂ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದು, ಯಾತ್ರೆಯುದ್ಧಕ್ಕೂ ಪ್ರಮುಖ ಪಾತ್ರ ವಹಿಸಿದ್ದಾರೆ.
ನಾಳೆ ಯಾತ್ರೆ ಅಂಚೆಚಿಟ್ಟನಹಳ್ಳಿ ಗೆ ತಲುಪಲಿದ್ದು, ರಾಹುಲ್ಗಾಂ ಆದಿಚುಂಚನಗಿರಿಮಠಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಹಾಜರಿ ಅತ್ಯಗತ್ಯವಾಗಿದೆ. ಹಾಗಾಗಿ ವಿಚಾರಣೆ ಮುಂದೊಂದು ದಿನ ಭಾಗವಹಿಸಲು ಕಾಲಾವಕಾಶ ನೀಡುವಂತೆ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದರು. ಆದರೆ ಅದನ್ನು ಪುರಸ್ಕರಿಸದ ಜಾರಿ ನಿರ್ದೇಶನಾಲಯ ನಿಗದಿತ ಸಮಯದಂದೇ ವಿಚಾರಣೆಗೆ ಹಾಜರಾಗುವಂತೆ ಇ-ಮೇಲ್ ಮೂಲಕ ತುರ್ತು ನೋಟಿಸ್ ನೀಡಿದೆ.
ಇದು ಡಿ.ಕೆ.ಶಿವಕುಮಾರ್ ಅವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಯಾತ್ರೆಯ ವಸತಿ, ಊಟ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಿ.ಕೆ.ಶಿವಕುಮಾರ್ಗೆ ಜಾರಿ ನಿರ್ದೇಶನಾಲಯ ನೋಟಿಸ್ ಬಿಸಿ ತುಪ್ಪವಾಗಿದೆ. ವಿಚಾರಣೆಗೆ ಹಾಜರಾಗಲೇಬೇಕಾದ ಅನಿವಾರ್ಯತೆಗಳ ಬಗ್ಗೆ ವಕೀಲರ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಯಂಗ್ ಇಂಡಿಯಾ ಪಾತ್ರ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಈ ಮೊದಲು ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂ, ಮಾಜಿ ಅಧ್ಯಕ್ಷ ರಾಹುಲ್ಗಾಂ, ರಾಜ್ಯಸಭೆ ಪ್ರತಿಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.
ಹೊಸದಾಗಿ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರೂ ಆಗಿರುವ ಸಂಸದ ಡಿ.ಕೆ.ಸುರೇಶ್ ಅವರಿಗೆ ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ನಿನ್ನೆ ರಾತ್ರಿ 9.10ಕ್ಕೆ ಮತ್ತೊಂದು ಇ-ಮೇಲ್ ಕಳುಹಿಸಿದ್ದು, ನಿಮಗೆ ಮತ್ತೊಮ್ಮೆ ನಿರ್ದೇಶನ ನೀಡಲಾಗುತ್ತಿದೆ. ನನ್ನ ಕಚೇರಿಯ ಮುಂದೆ ಅಕ್ಟೋಬರ್ 7ರಂದು ಹಾಜರಾಗಿ ಹೇಳಿಕೆ ನೀಡಬೇಕು ಎಂದು ಸಮನ್ಸ್ ಮಾಡುತ್ತಿರುವುದಾಗಿ ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಕುಲದೀಪ್ ಸಿಂಗ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್ , ತಾವು ಕಾನೂನಿಗೆ ಗೌರವ ನೀಡುವವನಾಗಿದ್ದು, ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಲು ಸಿದ್ಧನಿದ್ದೇನೆ. ಆದರೆ ಭಾರತ ಐಕ್ಯತಾ ಯಾತ್ರೆ ಹಿನ್ನೆಲೆಯಲ್ಲಿ ಸಮಯ ನೀಡುವಂತೆ ಮನವಿ ಮಾಡಿದ್ದೆ. ಆದರೆ ಕೂಡಲೇ ವಿಚಾರಣೆಗೆ ಹಾಜರಾಗುವಂತೆ ಮತ್ತೊಂದು ಇ-ಮೇಲ್ ಕಳುಹಿಸಿದ್ದಾರೆ. ಈ ಕುರಿತು ವಕೀಲರ ಜೊತೆ ಚರ್ಚೆ ನಡೆಸುತ್ತೇನೆ. ಹಾಜರಾಗಲೇ ಬೇಕು ಎಂದರೆ ದೆಹಲಿಗೆ ತೆರಳುತ್ತೇನೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ಒಂದೆಡೆ ಮಾಧ್ಯಮದವರಿಗೂ ಕಿರಿಕಿರಿ ಮಾಡುತ್ತಿವೆ, ನನಗೂ ತೊಂದರೆ ಕೊಡುತ್ತಿದ್ದಾರೆ. ಯಾವುದೇ ತಪ್ಪು ಮಾಡದಿದ್ದರೂ ಜಾರಿ ನಿರ್ದೇಶನಾಲಯ ಪ್ರಕರಣದ ಮೇಲೆ ಪ್ರಕರಣ ದಾಖಲಿಸಿ ನೋಟಿಸ್ ನೀಡುತ್ತಿದೆ. ಬಹುಶಃ ಈಗ ನೀಡಿರುವ ನೋಟಿಸ್ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದ್ದಾಗಿರಬಹುದು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.