ನವದೆಹಲಿ, ಜ.18- ಚುನಾವಣೆ ಘೋಷಣೆಯಾಗಿರುವ ಪಂಜಾಬ್‍ನಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಅಖಾಡ ಪ್ರವೇಶ ಮಾಡಿವೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಅಕ್ರಮ ಮರಳು ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಚರಣ್‍ಜಿತ್‍ಸಿಂಗ್ ಚೆನ್ನಿ ಅವರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ಸೋಮವಾರ ಪಂಜಾಬ್‍ನ 10 ಕಡೆಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯಾಚರಣೆ ನಡೆದಿದೆ. ಅದರಲ್ಲಿ ಮುಖ್ಯಮಂತ್ರಿ ಚೆನ್ನಿ ಅವರ ಸಂಬಂಧಿಯಾಗಿರುವ ಭೂಪಿಂದರ್ ಸಿಂಗ್ ಹೊನ್ನಿಯು ಸೇರ್ಪಡೆಯಾಗಿದ್ದಾರೆ. ಮೂಲಗಳ ಪ್ರಕಾರ ಭೂಪಿಂದರ್ ಅವರು ಮರಳು ಗಣಿಗಾರಿಕೆಯನ್ನು ಪಡೆಯಲು ಪಂಜಾಬ್ ರೀಲರ್ಸ್ ಹೆಸರಿನಲ್ಲಿ ಕಂಪೆನಿ ಹುಟ್ಟು ಹಾಕಿದ್ದರು ಎಂಬ ಆರೋಪಗಳಿವೆ. ಜೊತೆಗೆ ಚೆನ್ನಿ ಅವರ ಅತ್ತೆ ಮಗ ವಾಸಿಸುವ ಹೋಂಲ್ಯಾಂಡ್ ಸೋಸೈಟಿ ಪ್ರದೇಶದಲ್ಲೂ ದಾಳಿ ನಡೆದಿದೆ.
ಮರಳು ಗಣಿ ಗುತ್ತಿಗೆ ಪಡೆಯಲು ಕಂಪೆನಿಯಲ್ಲಿ ಕಪ್ಪು ಹಣ ಹೂಡಿಕೆ ಮಾಡಿರುವ ಶಂಕೆಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವ್ಯಕ್ತ ಪಡಿಸಿದ್ದಾರೆ. ಕಂಪೆನಿಗೆ ಸಣ್ಣ ಪ್ರಮಾಣದ ಹೂಡಿಕೆ ಮಾಡಿ ಕೋಟ್ಯಂತರ ರೂಪಾಯಿ ಮೊತ್ತದ ಗುತ್ತಿಗೆ ಪಡೆಯಲಾಗುತ್ತಿದೆ ಎಂಬ ಆರೋಪಗಳಿವೆ.
ಪಂಜಾಬ್‍ನಲ್ಲಿ ಸರ್ಕಾರವೇ ಅಕ್ರಮ ಮರಳು ಗಣಿಗಾರಿಕೆಗೆ ಬೆಂಬಲವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. 2021ರ ಡಿಸೆಂಬರ್‍ನಲ್ಲಿ ಅಮ್‍ಆದ್ಮಿ ನೇರ ಆರೋಪ ಮಾಡಿ, ಮುಖ್ಯಮಂತ್ರಿ ಚೆನ್ನಿ ಅವರ ಸ್ವಕ್ಷೇತ್ರ ಛಮಕೌರ್ ಸಾಹಿಬ್‍ನಲ್ಲೇ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ದೂರಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮ್‍ಆದ್ಮಿ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಅಕ್ರಮ ಮರಳು ಗಣಿಗಾರಿಕೆಯಲ್ಲಿ ಪಂಜಾಬ್‍ನ ಮುಖ್ಯಮಂತ್ರಿ ಮತ್ತು ಅವರ ಸಂಬಂಧಿಕರು ಭಾಗವಹಿಸಿರುವುದು ಆ ಕಾರಣಕ್ಕೆ ಜಾರಿ ನಿರ್ದೇಶನಾಲಯ ಇಂದು ದಾಳಿ ನಡೆಸಿರುವುದು ದುಖಃಕರ ಎಂದು ಪ್ರತಿಕ್ರಿಯಿಸಿದ್ದಾರೆ.
