ಕುಂಕುಮ, ಬಳೆ ತೆಗಿಸುವ ಪ್ರಯತ್ನ ಮಾಡಿದರೆ ಹುಷಾರ್ : ಸಚಿವ ಬಿ.ಸಿ.ನಾಗೇಶ್ ಎಚ್ಚರಿಕೆ

Social Share

ಬೆಂಗಳೂರು,ಫೆ.19- ಸಿಂಧೂರ, ಕುಂಕುಮ, ಬಳೆ ಬಗ್ಗೆ ಪ್ರಶ್ನೆ ಬೇಡ, ಅದು ನಮ್ಮ ಸಂಸ್ಕೃತಿಯ ಪ್ರತೀಕ, ಅಲಂಕಾರಿಕ ವಸ್ತು ಅದಕ್ಕೂ ಹಿಜಾಬ್‍ಗೂ ಸಂಬಂಧವಿಲ್ಲ, ಅದನ್ನು ಧರಿಸಿ ಶಾಲೆ-ಕಾಲೇಜುಗಳಿಗೆ ಬಂದವರನ್ನು ತಡೆದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಳೆ, ಬಿಂದಿ,ಸಿಂಧೂರ, ಕುಂಕುಮಗಳು ಅಲಂಕಾರಿಕ ವಸ್ತುಗಳು, ಅವುಗಳಿಗೆ ನಿರ್ಬಂಧ ಹಾಕಲು ಸಾಧ್ಯವಿಲ್ಲ. ಹಿಜಾಬ್ ಧಾರ್ಮಿಕ ಗುರುತನ್ನು ಸಂಕೇತಿಸುವ ಬಟ್ಟೆ ಹಿಜಾಬ್‍ಗೆ ಪ್ರತಿಯಾಗಿ ಬಳೆ, ಸಿಂಧೂರ, ಕುಂಕುಮವನ್ನು ಹೋಲಿಸುವುದು ಬೇಡ. ಅದನ್ನು ಧರಿಸಿ ಬಂದವರನ್ನು ತಡೆದರೆ ಅಂತಹ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ ಎಂದು ಹೇಳಿದರು.
ಹಿಜಾಬ್ ಧರ್ಮವನ್ನು ಸೂಚಿಸಿದರೆ ಬಳೆ, ಕುಂಕುಮ, ಬಿಂದಿ, ಸಿಂಧೂರ ಅಲಂಕಾರವನ್ನು ಸೂಚಿಸುತ್ತದೆ. ಅಲಂಕಾರಿಕ ವಸ್ತುಗಳನ್ನು ಧರಿಸಿಕೊಂಡು ಬನ್ನಿ ಎಂದು ನಾವು ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡಿಲ್ಲ. ಸ್ವ ಇಚ್ಛೆಯಿಂದ ಹಾಕಿಕೊಂಡು ಬರುತ್ತಾರೆ ಎಂದು ಅವರು ಸ್ಪಷ್ಟನೆ ನೀಡಿದರು.
ನಿನ್ನೆ ವಿಜಯಪುರದ ಇಂಡಿ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ತಿಲಕ ಇಟ್ಟುಕೊಂಡು ಬಂದ ವಿದ್ಯಾರ್ಥಿಗೆ ತರಗತಿಯೊಳಗೆ ಶಿಕ್ಷಕರು ಪ್ರವೇಶ ನಿರಾಕರಿಸಿದ್ದು ಭಾರೀ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ಈ ಆದೇಶ ನೀಡಿದ್ದಾರೆ.

Articles You Might Like

Share This Article