ಶಾಲಾಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ : ಸಚಿವ ನಾಗೇಶ್

Social Share

ಬೆಂಗಳೂರು,ಅ.13- ಹಿಜಾಬ್ ಕುರಿತಂತೆ ಸುಪ್ರೀಂಕೋರ್ಟ್‍ನ ದ್ವಿಸದಸ್ಯ ಪೀಠ ವಿಭಿನ್ನ ತೀರ್ಪು ನೀಡಿರುವ ಹಿನ್ನಲೆ ಶಾಲಾಕಾಲೇಜುಗಳಲ್ಲಿ ಸಮವಸ್ತ್ರ ಹೊರತುಪಡಿಸಿ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಸುಪ್ರೀಂಕೋರ್ಟ್‍ನ ದ್ವಿಸದಸ್ಯ ಪೀಠದ ಇಬ್ಬರು ನ್ಯಾಯಮೂರ್ತಿಗಳು ಭಿನ್ನವಾದ ತೀರ್ಪು ನೀಡಿದ್ದಾರೆ. ಸುಪ್ರೀಂಕೋರ್ಟ್‍ನ ಅಂತಿಮ ತೀರ್ಪು ಬರುವವರೆಗೂ ಹೈಕೋರ್ಟ್ ನೀಡಿರುವ ಆದೇಶ ಮುಂದುವರೆಯುತ್ತದೆ ಎಂದು ಸ್ಪಷ್ಪಪಡಿಸಿದರು.

ಶಾಲಾಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಯೇ ತರಗತಿಗಳಿಗೆ ಬರಬೇಕು. ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿ ಬರುವಂತಿಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆ ರೂಪಿಸಿರುವ ಸಮವಸ್ತ್ರ ನೀತಿಯನ್ನು ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಮನವಿ ಮಾಡಿದರು.

ನ್ಯಾಯಾಲಯ ನೀಡಿರುವ ಆದೇಶವನ್ನು ನಾನು ಸ್ವಾಗತಿಸುತ್ತೇವೆ. ವಿಭಿನ್ನ ತೀರ್ಪು ಬಂದಿರುವ ಕಾರಣ ಈ ಪ್ರಕರಣವನ್ನು ಸಾಂವಿಧನ ಪೀಠದಲ್ಲಿ ಇತ್ಯರ್ಥವಾಗಬಹುದು. ಅಲ್ಲಿಯವರೆಗೂ ಹೈಕೋರ್ಟ್ ನೀಡಿರುವ ಆದೇಶ ಯಥಾಸ್ಥಿತಿಯಲ್ಲಿರುತ್ತದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು.

ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡುವವರೆಗೂ ರಾಜ್ಯ ಸರ್ಕಾರ ಹೈಕೋರ್ಟ್ ನೀಡಿರುವ ಆದೇಶವನ್ನು ಚಾಚೂತಪ್ಪದೆ ಪಾಲನೆ ಮಾಡುತ್ತದೆ. ಯಾರೂ ಕೂಡ ಅನಗತ್ಯವಾಗಿ ಗೊಂದಲ ಸೃಷ್ಟಿಸಬೇಕಾದ ಅಗತ್ಯವಿಲ್ಲ. ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿರುವ ನ್ಯಾಯಾಲಯದ ತೀರ್ಪನ್ನು ನಾನು ಗೌರವಿಸುತ್ತೇನೆ ಎಂದರು.

ವಿದ್ಯಾರ್ಥಿಗಳಿಗೆ ಈಗಲೂ ಕೂಡ ನಾನು ಮನವಿ ಮಾಡುವುದೇನೆಂದರೆ ಸಮವಸ್ತ್ರಕ್ಕಿಂತ ಶಿಕ್ಷಣ ಮುಖ್ಯ ಎಂಬುದನ್ನು ಮನಗಂಡು ಎಲ್ಲ ವಿದ್ಯಾರ್ಥಿಗಳು ಶಾಲಾಕಾಲೇಜುಗಳಿಗೆ ಬರಬೇಕು. ನಿಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ನಾಗೇಶ್ ಕಿವಿಮಾತು ಹೇಳಿದರು.

ವಿಶ್ವಾದ್ಯಂತ ಇಂದು ಮಹಿಳೆಯರು ಹಿಜಾಬ್/ಬುರ್ಖಾ ಧರಿಸಬಾರದು ಎಂದು ಒತ್ತಾಯಿಸುತ್ತಿದ್ದಾರೆ. ಕರ್ನಾಟಕ ಸರ್ಕಾರ ಕೂಡ ಅದನ್ನು ಪ್ರೋತ್ಸಾಹಿಸುತ್ತದೆ. ಇಂದು ಸುಪ್ರೀಂ ಕೋರ್ಟ್ ನಿಂದ ಉತ್ತಮ ತೀರ್ಪು ನಿರೀಕ್ಷಿಸಿದ್ದೆವು. ಈ ಮಧ್ಯೆ ಕರ್ನಾಟಕ ಹೈಕೋರ್ಟ್ ಆದೇಶವು ಮಧ್ಯಂತರ ಸಮಯದಲ್ಲಿ ಅನ್ವಯಿಸುತ್ತದೆ, ಅಲ್ಲಿಯವರೆಗೂ ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ನಿಯಮ ಮುಂದುವರಿಯುತ್ತದೆ, ಸುಪ್ರೀಂ ಕೋರ್ಟ್ ನಿಂದ ಏನೇ ತೀರ್ಪು ಬಂದರೂ ಸ್ವಾಗತಿಸುತ್ತೇವೆ ಎಂದು ಅವರು ಪುನರುಚ್ಚರಿಸಿದರು.

Articles You Might Like

Share This Article