ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಪರತೆಯೇ ಜರೂರು : ಅಶ್ವತ್ಥ್‍ನಾರಾಯಣ

Social Share

ಬೆಂಗಳೂರು,ಜ.14- ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಸುಧಾರಣೆ ತಂದರೆ ಉಳಿದ ಕ್ಷೇತ್ರಗಳು ತಮ್ಮಿಂದ ತಾವೇ ಸರಿ ಹೋಗುತ್ತವಲ್ಲದೆ, ಇಡೀ ದೇಶ ಅಭಿವೃದ್ಧಿ ಹೊಂದುತ್ತದೆ. ಆದ್ದರಿಂದ ಶಿಕ್ಷಣ ಕ್ಷೇತ್ರವು ಸಂಪೂರ್ಣ ವೃತ್ತಿಪರವಾಗಬೇಕಾಗಿದ್ದು, ತಂತ್ರಜ್ಞಾನ ಮತ್ತು ಅನ್ವೇಷಣೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಬೆಂಗಳೂರು ಉತ್ತರ ವಲಯವು ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸುಧಾರಣೆ ಕುರಿತ ಸಂವಾದ ಮತ್ತು ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗಕ್ಕೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಅಂಗವಾಗಿ ನಾಲ್ಕು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳೇ ಉಪಗ್ರಹವನ್ನು ತಯಾರಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ ನವೋದ್ಯಮ ಮತ್ತು ನಾವೀನ್ಯತೆಗಳಿಗೆ ಒತ್ತು ಕೊಡುವ ಗುರಿ ಇದೆ. ಇಸ್ರೇಲ್ ಹೇಗೆ ನವೋದ್ಯಮಗಳ ರಾಷ್ಟ್ರವಾಗಿದೆಯೋ ಹಾಗೆ ನಾವು ಕೂಡ ಸಾಧನೆ ಮಾಡಬೇಕು ಎಂದು ಅವರು ಉತ್ತೇಜಿಸಿದರು.
ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಪ್ರೌಢ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾರಾಯಣ, ಬಿಇಒಗಳಾದ ಉಮಾದೇವಿ, ಜಯಪ್ರಕಾಶ್, ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.

Articles You Might Like

Share This Article