ಶೈಕ್ಷಣಿಕ ಸಾಲ ಮಿತಿ 10 ಲಕ್ಷಕ್ಕೆ ಏರಿಕೆ

Social Share

ನವದೆಹಲಿ,ಅ.13- ಶಿಕ್ಷಣ ಸಾಲಕ್ಕೆ ಖಾತ್ರಿಯ ಮಿತಿಯನ್ನು 7.5 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸಬೇಕೆಂಬ ಬ್ಯಾಂಕ್ ಆಡಳಿತ ಮಂಡಳಿಗಳ ಪ್ರಸ್ತಾವಕ್ಕೆ ಕೇಂದ್ರ ಹಣಕಾಸು ಇಲಾಖೆಯು ಹಸಿರು ನಿಶಾನೆ ತೋರಿಸಿದ್ದು, ಈ ಸಂಬಂಧ ಶೀಘ್ರ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆಯಿದೆ.

ಇದರೊಂದಿಗೆ ಶಿಕ್ಷಣ ಸಾಲ ವಿತರಣೆಗೆ ಇರುವ ಷರತ್ತುಗಳನ್ನೂ ಸಡಿಲಿಸುವ ಸಾಧ್ಯತೆಯಿದ್ದು ಈ ಬೆಳವಣಿಗೆಗಳು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಕೇಂದ್ರ ಸರ್ಕಾರದ ಈ ಕ್ರಮವು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಸಾಲ ಮಂಜೂರಾತಿಯಲ್ಲಿ ಆಗುತ್ತಿರುವ ವಿಳಂಬ ಮತ್ತು ಸಾಲದ ಅರ್ಜಿಗಳ ನಿರಾಕರಣೆಗೆ ಸಂಬಂಧಿಸಿದಂತೆ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಾಲದ ಖಾತ್ರಿಯನ್ನು ಹೆಚ್ಚಿಸುವ ನಿರ್ಧಾರಕ್ಕೆ ಬಂದಿದೆ.

ಪ್ರಸ್ತುತ 7.5 ಲಕ್ಷದವರೆಗಿನ ಶಿಕ್ಷಣ ಸಾಲ ಪಡೆಯಲು ಯಾವುದೇ ಭದ್ರತೆ ಬೇಕಿಲ್ಲ. ಅಂದರೆ ಬ್ಯಾಂಕುಗಳು ಈ ಮೊತ್ತದ ಸಾಲ ಮಂಜೂರು ಮಾಡಲು ಯಾವುದೇ ಅಡಮಾನಕ್ಕೆ ಒತ್ತಾಯಿಸುವಂತಿಲ್ಲ. ಇದಕ್ಕೂ ಹೆಚ್ಚಿನ ಮೊತ್ತದ ಸಾಲ ಪಡೆಯಲು ನಿಯಮಗಳು ಬಿಗಿಯಾಗಿವೆ.

ಇದೀಗ ಸಾಲದ ಖಾತ್ರಿ ಮಿತಿಯನ್ನು ಶೇ.33ರಷ್ಟು ಹೆಚ್ಚಿಸುವ ಬಗ್ಗೆಯೂ ಹಣಕಾಸು ಸಚಿವಾಲಯವು ಶಿಕ್ಷಣ ಇಲಾಖೆಯೊಂದಿಗೆ ಸಮಾಲೋಚನೆ ಆರಂಭಿಸಿದೆ. ಪ್ರಸ್ತುತ ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರಗಳು ಶಿಕ್ಷಣ ಸಾಲದ ಮಿತಿಯನ್ನು 10 ಲಕ್ಷಕ್ಕೆ ಹೆಚ್ಚಿಸಲು ಹೆಚ್ಚುವರಿ ಖಾತ್ರಿ ಕೊಡುತ್ತಿವೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವೇ ಖಾತ್ರಿಯ ಮಿತಿಯನ್ನು ಹೆಚ್ಚಿಸುವ ಮೂಲಕ ದೇಶದ ಎಲ್ಲರಿಗೂ ಸಮಾನವಾಗಿ ಶಿಕ್ಷಣ ಸಾಲದ ಅನುಕೂಲ ಸಿಗುತ್ತದೆ.

ಶಿಕ್ಷಣ ಸಾಲ ಪಡೆದ ವಿದ್ಯಾರ್ಥಿಗಳು ನಂತರದ ದಿನಗಳಲ್ಲಿ ಮರುಪಾವತಿ ಬಗ್ಗೆ ಗಮನ ಹರಿಸುತ್ತಿಲ್ಲ. ಇದರಿಂದ ಸುಸ್ತಿ ಸಾಲಗಳ ಪ್ರಮಾಣ ಹೆಚ್ಚಾಗುತ್ತಿದೆ ಎಂದು ವಾದಿಸುತ್ತಿರುವ ಸರ್ಕಾರಿ ಬ್ಯಾಂಕುಗಳು ಶಿಕ್ಷಣ ಸಾಲ ಮಂಜೂರು ಮಾಡಲು ಹಿಂಜರಿಯುತ್ತಿವೆ.

ಈ ಬಗ್ಗೆಯೂ ಹಣಕಾಸು ಇಲಾಖೆ ಗಮನಹರಿಸಿದ್ದು, ನಗಣ್ಯ ಎನಿಸುವಂಥ ಸಣ್ಣಪುಟ್ಟ ಲೋಪಗಳನ್ನೇ ದೊಡ್ಡದು ಮಾಡಿ ಸಾಲ ನಿರಾಕರಿಸಬೇಡಿ ಎಂದು ತಾಕೀತು ಮಾಡಿದೆ. ಇದಕ್ಕೆ ಪ್ರತಿಯಾಗಿ ಬ್ಯಾಂಕ್‍ಗಳು ಖಾತರಿ ಮಿತಿ ಹೆಚ್ಚಿಸಬೇಕು ಎಂದು ಕೋರಿವೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರಿ ಬ್ಯಾಂಕ್‍ಗಳಿಗೆ 20,000 ಕೋಟಿ ಶಿಕ್ಷಣ ಸಾಲ ವಿತರಿಸಬೇಕೆನ್ನುವ ಗುರಿ ನೀಡಲಾಗಿದೆ. ಮೊದಲ ತ್ರೈಮಾಸಿಕದ ಅಂತ್ಯದ ಹೊತ್ತಿಗೆ ಬ್ಯಾಂಕುಗಳು ಈ ಗುರಿಯ ಪೈಕಿ ಶೇ 19ರಷ್ಟನ್ನು ಮುಟ್ಟಿದ್ದವು. ಈ ಗುರಿಯನ್ನು ಸಾಸಲು ಬ್ಯಾಂಕುಗಳು ಹೆಚ್ಚು ಸಾಲ ನೀಡಲು ಪ್ರಾರಂಭಿಸಬೇಕೆಂದು ಸರ್ಕಾರವು ಸೂಚಿಸಿದೆ.

Articles You Might Like

Share This Article