ವಿಶ್ವವಿದ್ಯಾಲಯದಂತೆ ‘ಈ ಸಂಜೆ’ ಪತ್ರಿಕೆ ಕೆಲಸ ಮಾಡುತ್ತಿದೆ : ದಿನೇಶ್

Social Share

ಬೆಂಗಳೂರು,ಜ.11- ಈ ಸಂಜೆ ಪತ್ರಿಕೆ ವಿಶ್ವವಿದ್ಯಾಲಯದ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಚ್.ಬಿ.ದಿನೇಶ್ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಸಂಜೆ ಪತ್ರಿಕೆಯು ಬಹಳಷ್ಟು ಪತ್ರಕರ್ತರನ್ನು ಹುಟ್ಟು ಹಾಕಿದೆ. ಈ ಸಂಜೆಯಲ್ಲಿ ತರಬೇತಿ ಪಡೆದ ಪತ್ರಕರ್ತರು ಹೆಸರಾಂತ ಪತ್ರಿಕೆ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಈ ಸಂಜೆ ಪತ್ರಿಕೆ ಸಂಪಾದಕರಾದ ಟಿ.ವೆಂಕಟೇಶ್ ಅವರು ಅಭಿಮಾನಿ ಪ್ರಶಸ್ತಿಯನ್ನು ಗ್ರಾಮೀಣ ಪತ್ರಕರ್ತರಿಗೆ ನೀಡಲು ದತ್ತಿನಿ ಸ್ಥಾಪಿಸಿದ್ದಾರೆ.ಕನ್ನಡಪರ ಹೋರಾಟದಿಂದ ಇಲ್ಲಿಯವರೆಗೂ ವೆಂಕಟೇಶ್ ಅವರ ಬೆಳವಣಿಗೆ ಗಮನಿಸಿದ್ದೇನೆ. ಆಧ್ಯಾತ್ಮಿಕವಾಗಿ ಹಾಗೂ ಮಾನವೀಯ ಸಂಬಂಧದಲ್ಲಿ ಬಹಳಷ್ಟು ಬದಲಾಗಿದ್ದಾರೆ. ದಕ್ಷಿಣ ಭಾರತದಲ್ಲೇ ನಂ.1 ಮುದ್ರಣ ಸಂಸ್ಥೆ ಹೊಂದಿರುವ ಹೆಗ್ಗಳಿಕೆ ಅಭಿಮಾನಿ ಸಂಸ್ಥೆಯದು ಎಂದರು.
ಕೋವಿಡ್ ಸಂಕಷ್ಟದಲ್ಲಿ ಪತ್ರಕರ್ತರ ಸಂಘವು ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಸ್ಪಂದಿಸಿದೆ. ಅದಕ್ಕಾಗಿ ಅಭಿನಂದಿಸುವುದಾಗಿ ಹೇಳಿದರು.ಹಿರಿಯ ಪತ್ರಕರ್ತ ಪದ್ಮರಾಜ್ ದಂಡವತಿ ಮಾತನಾಡಿ, ಪತ್ರಕರ್ತರ ಬದುಕು ಅಭದ್ರತೆಯಲ್ಲಿದೆ. ಯಾರಿಗೂ ಹೊರೆಯಾಗದ ರೀತಿಯಲ್ಲಿ ಪತ್ರಕರ್ತರಿಗೆ ಭದ್ರತೆ ಒದಗಿಸಬೇಕಾದ ಅನಿವಾರ್ಯತೆ ಇದೆ. ಸಂಬಂಧಗಳು ಶಿಥಿಲವಾಗುತ್ತಿದ್ದು , ಅಸೂಯೆ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಯಾರ ಮುಂದೆಯೂ ಕೈಯೊಡ್ಡದ ರೀತಿಯಲ್ಲಿ ಪತ್ರಕರ್ತರು ಬದುಕುವ ಬಗ್ಗೆ ಚಿಂತನೆ ಮಾಡಬೇಕು ಎಂದು ಸಲಹೆ ಮಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಕಲಬುರಗಿಯಲ್ಲಿ ನಡೆದ 36ನೇ ರಾಜ್ಯ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಬೇಕಾಗಿತ್ತು. ಅದು ಸಾಧ್ಯವಾಗದ ಕಾರಣ ಇಂದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಟಿ.ವೆಂಕಟೇಶ್ ಅವರು ರಾಜ್ಯೋತ್ಸವ ಪ್ರಶಸ್ತಿ ಹಣವನ್ನು ನಮ್ಮ ಸಂಘಕ್ಕೆ ದೇಣಿಗೆಯಾಗಿ ನೀಡಿದ್ದು, ಪ್ರತಿ ವರ್ಷದ ವಾರ್ಷಿಕ ಸಮ್ಮೇಳನದಲ್ಲಿ ಗ್ರಾಮೀಣ ಭಾಗದ ಪತ್ರಕರ್ತರಿಗೆ ಅಭಿಮಾನಿ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.
ಹಿರಿಯ ಪತ್ರಕರ್ತ ಚಂದ್ರಕಾಂತ ವಡ್ಡು ಅವರಿಗೆ ನಾಡಿಗೇರ ಕೃಷ್ಣರಾಯರ ಸ್ಮಾರಕ ಪ್ರಶಸ್ತಿ, ಈ ಸಂಜೆ ಪತ್ರಿಕೆಯ ಸಂಪಾದಕರಾದ ಟಿ.ವೆಂಕಟೇಶ್ ಅವರಿಗೆ ಮಾ.ರಾಮಮೂರ್ತಿ ಸ್ಮಾರಕ ಪ್ರಶಸ್ತಿ, ಖ್ಯಾತ ಛಾಯಗ್ರಾಹಕ ವಿಶ್ವನಾಥ್ ಸುವರ್ಣ ಅವರಿಗೆ ಬಂಡಾಪುರ ಮುನಿರಾಜು ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾಕ್ಟರೇಟ್ ಪದವಿ ಪಡೆದ ಪದ್ಮರಾಜ್ ದಂಡವತಿ ಹಾಗೂ ವಾರ್ತಾ ಮತ್ತು ಸಂಪರ್ಕ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಚ್.ಬಿ.ದಿನೇಶ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Articles You Might Like

Share This Article