31ನೇ ವಸಂತಕ್ಕೆ ಕಾಲಿಟ್ಟ ಸ್ವಾಭಿಮಾನ, ಬದ್ಧತೆಯ ಪ್ರತೀಕ ನಿಮ್ಮ ‘ಈಸಂಜೆ’ ಪತ್ರಿಕೆ

ಯಶಸ್ವಿ 30 ವರ್ಷಗಳನ್ನು ಪೂರೈಸಿ 31ನೇ ವಸಂತಕ್ಕೆ ಪಾದಾರ್ಪಣೆ ಮಾಡಿರುವ ಕನ್ನಡಿಗರ ಕಣ್ಮಣಿ ಈ ಸಂಜೆ ಪತ್ರಿಕೆ ಅಪಾರ ಓದುಗರ ಮನಸೆಳೆದಿದೆ. ಓದುಗ ಅಭಿಮಾನಿಗಳ ಮನೆ ಮನಗಳಲ್ಲಿ ಸ್ಥಾನ ಪಡೆದಿದೆ. ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿ ಮಾಧ್ಯಮ ಲೋಕಕ್ಕೆ ಕಾಲಿಟ್ಟ ಈ ಸಂಜೆ ದೈನಿಕವು ದಿನೇ ದಿನೇ ಹೊಸ ಹೊಸ ಆಯಾಮಗಳೊಂದಿಗೆ ಆಲದ ಮರದಂತೆ ಬೆಳೆದಿದೆ.

ದಿಟ್ಟ ನಡೆ-ನುಡಿಯ ಮೂಲಕ ಕನ್ನಡಿಗರ ದನಿಯಾಗಿ ಹೊರಹೊಮ್ಮಿರುವ ಈ ಸಂಜೆ ಪತ್ರಿಕೆಯು ನೇರ-ನಿಷ್ಠುರ ನಿಲುವನ್ನು ಸದಾ ಪ್ರತಿಪಾದಿಸುತ್ತಲೇ ಬಂದಿದೆ. ಕನ್ನಡ ನಾಡು, ನುಡಿ, ಜಲ, ಸಂಸ್ಕøತಿಯ ಒಳಿತಿಗಾಗಿ ಮುಂಚೂಣಿಯಲ್ಲಿ ನಿಂತು ಕನ್ನಡತನವನ್ನು ಮೆರೆಯುತ್ತಾ ಬಂದಿರುವ ಈ ಸಂಜೆಯು ಬದಲಾದ ಕಾಲಮಾನಕ್ಕೆ ತಕ್ಕಂತೆ ಹೊಸ ಹೊಸ ಚಿಂತನೆಗಳೊಂದಿಗೆ ವಿಸ್ತಾರಗೊಳ್ಳುತ್ತಾ ಸಾಗುತ್ತಿರುವುದು ಹೆಮ್ಮೆಯ ವಿಷಯ.

ಈ ಸಂಜೆ ಕನ್ನಡದ ಸ್ವಾಭಿಮಾನದ ಸಂಕೇತ. ಅದೊಂದು ದೃಢ ಸಂಕಲ್ಪದ ಬದ್ಧತೆ. ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಸಾಮಾಜಿಕ ಕಳಕಳಿ, ಜೀವಪರ ಕಾಳಜಿಯೊಂದಿಗೆ ಯಶಸ್ಸಿನ ಹಾದಿಯತ್ತ ಸಾಗುತ್ತಿರುವುದು ಹೆಮ್ಮೆಯ ಸಂಗತಿ. ಇದು ನಮ್ಮ ಬೆನ್ನು ತಾನೇ ತಟ್ಟಿಕೊಂಡು ಹೇಳುತ್ತಿರುವುದಲ್ಲ. ಒಣ ಉಪನ್ಯಾಸವೂ ಅಲ್ಲ. ಕನ್ನಡತನವನ್ನು ಮೈಗೂಡಿಸಿಕೊಂಡು ಕನ್ನಡ ಹೋರಾಟಗಳಿಗೆ ಮೆಟ್ಟಿಲಾಗಿ ಕನ್ನಡಿಗರ ಆತ್ಮಗೌರವದ ಪ್ರತೀಕವಾಗಿ ನಮ್ಮೆಲ್ಲರೆದುರು ಬೃಹದಾಕಾರವಾಗಿ ಬೆಳೆದು ನಿಂತಿದೆ ಈ ಸಂಜೆ ಪತ್ರಿಕೆ.

ಕಾವೇರಿ ಹೋರಾಟ, ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಸಂದರ್ಭ, ಅನ್ಯ ಭಾಷಿಗರ ಹಾವಳಿ, ಎಲ್ಲ ಸಂದರ್ಭದಲ್ಲಿಯೂ ಸಂಕಷ್ಟದಲ್ಲಿದ್ದವರ ಬೆನ್ನೆಲುಬಾಗಿ ನಿಂತು ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಈ ಸಂಜೆ ಪತ್ರಿಕೆ ಮಾಡುತ್ತಾ ಬಂದಿದೆ.
ಪ್ರವಾಹದಿಂದ ಮಡಿಕೇರಿಯಲ್ಲಿ ಗುಡ್ಡಕುಸಿತ, ಸಾವು-ನೋವು, ಉತ್ತರ ಕರ್ನಾಟಕದ ನೆರೆ ಹಾವಳಿಯಿಂದ ಜನ ಸಂತ್ರಸ್ತರಾದಾಗ , ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಭೂ ಒತ್ತುವರಿ ನೆಪದಲ್ಲಿ ಸರ್ಕಾರ ಕಟ್ಟಡಗಳನ್ನು ಧ್ವಂಸಗೊಳಿಸಿದಾಗ, ಜನರು ನೆಲೆ ಕಳೆದುಕೊಂಡಾಗ ಧ್ವನಿಯಾಗಿ ನಿಂತಿದ್ದು ಈ ಸಂಜೆ.

ಜನಹಿತ ಕಾಪಾಡುವುದನ್ನು ಇಂದಿಗೂ ತನ್ನ ಕಾಯಕ ಮಾಡಿಕೊಂಡು ಸಮಸ್ತ ಕನ್ನಡಾಭಿಮಾನಿಗಳ ಅಭಿಮಾನದ ಪತ್ರಿಕೆಯಾಗಿದೆ. 30 ವರ್ಷಗಳು ಸವೆಸಿದ ಹಾದಿ ಅಷ್ಟೇನೂ ಸುಲಭದ್ದಲ್ಲ. ಸಾಕಷ್ಟು ಏಳು- ಬೀಳುಗಳನ್ನು ಕಂಡಿದೆ. ಯಾವುದಕ್ಕೂ ಅಂಜದೆ-ಅಳುಕದೆ ಮುನ್ನಡೆಯತ್ತ ಪ್ರಜಾಪ್ರಭುತ್ವದ ಆಧಾರ ಸ್ತಂಭವಾದ ಮಾಧ್ಯಮ ರಂಗದಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಸಾಗಿದೆ. ಸಂಜೆ ಪತ್ರಿಕೆಯಾದರೂ ದಿನಪತ್ರಿಕೆಗಳಿಗೆ ಕಡಿಮೆಯಿಲ್ಲದಂತೆ ಸುದ್ದಿಗಳ ಪ್ರಸಾರ ಈ ಸಂಜೆಯಲ್ಲಿ ಬಿತ್ತರಗೊಳ್ಳುತ್ತಿದೆ. ಇದಕ್ಕಾಗಿ ಎಲ್ಲ ದಿನಪತ್ರಿಕೆಗಳಿಗೆ ಈ ಸಂಜೆ ಒಂದು ಆಕರವಾಗಿದೆ.

ಈ ಸಂಜೆ ಪತ್ರಿಕೆಯು ಹಲವು ಪ್ರಥಮಗಳಿಗೂ ಕಾರಣವಾಗಿದೆ. ಸಾವಿರಾರು ಜನರ ಬದುಕಿಗೆ ಆಶ್ರಯವಾಗಿದೆ. ಮಾಧ್ಯಮ ಲೋಕದ ಪ್ರಯೋಗಶಾಲೆಯಾಗಿಯೂ ಹೊರಹೊಮ್ಮಿದೆ ಎಂದು ಹೇಳುವುದರಲ್ಲಿ ನಮಗೆ ಹೆಮ್ಮೆಯಿದೆ. ಇಲ್ಲಿ ಅರಿತು ನುರಿತವರು ಮಾಧ್ಯಮ ಲೋಕದಲ್ಲಿ ಬೆಳೆದು ದಿಗ್ಗಜರಾಗಿದ್ದಾರೆ. ಆ ರೀತಿಯ ಅಗ್ರಜನಂತೆ ಈ ಸಂಜೆ ಕೆಲಸ ಮಾಡಿದೆ. ವಿದ್ಯುನ್ಮಾನ ಮಾಧ್ಯಮಗಳ ಭರಾಟೆಯಲ್ಲಿ ಮುದ್ರಣ ಮಾಧ್ಯಮಗಳು ಎಲ್ಲಿ ಕುಸಿದು ಹೋಗುತ್ತವೋ ಎಂಬ ಆತಂಕದ ನಡುವೆಯೂ ಈ ಸಂಜೆ ತನ್ನ ಮಾಧ್ಯಮ ಪಾವಿತ್ರ್ಯತೆ ಉಳಿಸಿ ಬೆಳೆಸಿಕೊಂಡು ತನ್ನತನವನ್ನು ಗಟ್ಟಿಗೊಳಿಸಿಕೊಂಡು ಬಂದಿದೆ.

ಸಂಜೆ ಪತ್ರಿಕೆಯ ಕೆಲಸವೆಂದರೆ ಅದು ತಂತಿ ಮೇಲಿನ ನಡಿಗೆ. ಅವಸರದ ಅಡುಗೆ. ಸಮಾಜದ ಹೊಣೆಗಾರಿಕೆ ಅರಿತು ಯಾವುದೇ ಮುಲಾಜಿಗೆ ಒಳಗಾಗದೆ ನಿರ್ಭೀತಿಯಿಂದ ಓದುಗರ ಅಭಿರುಚಿಗೆ ತಕ್ಕಂತೆ ಸುದ್ದಿ ಪ್ರಸಾರ ಮಾಡುತ್ತಾ ಎಲ್ಲರ ಮನೆ ಮಾತಾಗಿದೆ.
ತಪ್ಪುಗಳಾಗದಂತೆ ಎಚ್ಚರ ವಹಿಸಿ ಕೆಲಸ ಮಾಡಬೇಕು. ಪಾದರಸದಂತೆ ಕೆಲಸ ನಿರ್ವಹಿಸುವ ಸಂಪಾದಕರ ಕಾರ್ಯದಕ್ಷತೆಯಿಂದಾಗಿ ಈ ಸಂಜೆ ಪತ್ರಿಕೆ ಎಲ್ಲದಕ್ಕಿಂತ ಒಂದು ಹೆಜ್ಜೆ ಮುಂದಿದೆ.

ಹಿಂದಿನ ಪತ್ರಿಕೋದ್ಯಮಕ್ಕೂ, ಇಂದಿನ ಪತ್ರಿಕೋದ್ಯಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನೂತನ ತಂತ್ರಜ್ಞಾನ ಸಾಕಷ್ಟು ಬದಲಾಗಿದೆ. ಅದಕ್ಕೆ ತಕ್ಕಂತೆ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಾ ಈ ಸಂಜೆ ಕೆಲಸ ನಿರ್ವಹಿಸುತ್ತಾ ಬಂದಿದೆ.
ಸಮಾಜಕ್ಕೆ ನೀತಿ ಬೋಧಕವಾಗಿ ಹೋರಾಟಗಳಿಗೆ ಸೂರ್ತಿಯಾಗಿದೆ. ಅಷ್ಟೇ ಅಲ್ಲದೆ, ಮನರಂಜನೆಗೂ ವೇದಿಕೆಯಾಗಿದೆ. ರಾಷ್ಟ್ರಪ್ರೇಮ, ಐಕ್ಯತೆ, ಸ್ವಾಭಿಮಾನ, ಪರೋಪಕಾರದಂತಹ ಭಾವನೆಗಳನ್ನು ಪ್ರಚೋದಿಸುವ, ಸತ್ಪ್ರಜೆಗಳನ್ನು ಸೃಷ್ಟಿಸುವ ಸಾಧನವಾಗಿದೆ. ಯುವಜನರಿಗೆ ಆದರ್ಶವಾಗಿ ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳ ಹಿತಾಸಕ್ತಿ ಸೇರಿದಂತೆ ಪ್ರತಿ ಹಂತದಲ್ಲೂ ಗಟ್ಟಿ ನಿಲುವು ಪ್ರದರ್ಶಿಸುತ್ತಾ ಯಾವ ಶಕ್ತಿಗಳೊಂದಿಗೂ ರಾಜಿ ಮಾಡಿಕೊಳ್ಳದೆ ಗಜರಾಜನಂತೆ ಮುನ್ನಡೆಯುತ್ತಿದೆ.
ನಾಡು-ನುಡಿ ಸೇವೆಯಲ್ಲಿ ತೊಡಗಿಸಿಕೊಂಡು ಕನ್ನಡಕ್ಕೆ ಧಕ್ಕೆಯುಂಟಾದಾಗ ಮೈ ಕೊಡವಿ ನಿಲ್ಲುವುದು ಈ ಸಂಜೆ ಪತ್ರಿಕೆ. ಕನ್ನಡಿಗರ ಕನ್ನಡತನ ಎತ್ತಿ ಹಿಡಿದು ಮುಂಚೂಣಿಯಲ್ಲಿ ನಿಂತು ಹೋರಾಟಗಾರರನ್ನು ಸಂಘಟಿಸಿದ ಏಕೈಕ ಪತ್ರಿಕೆ. ಈಗ ಆಲದ ಮರದಂತೆ ಬೆಳೆದು ನಿಂತಿದೆ. ಅದರ ಬಿಳಿಲುಗಳು ದೊಡ್ಡದಾಗಿವೆ.

ರಾಜಧಾನಿಯಲ್ಲಿ ಎರಡು ಆವೃತ್ತಿಗಳು ಮುದ್ರಣವಾಗಿ 15 ಜಿಲ್ಲೆಗಳಿಗೆ ತಲುಪುತ್ತವೆ. ಹುಬ್ಬಳ್ಳಿ-ಬೆಳಗಾವಿಯಲ್ಲೂ ಆವೃತ್ತಿಗಳು ಪ್ರಾರಂಭವಾಗಿ ಹೆಸರು ಮಾಡಿದೆ. ಪತ್ರಿಕೆ ನಾಡಿನಾದ್ಯಂತ ವ್ಯಾಪಿಸಬೇಕೆಂಬುದು ಆಭಿಮಾನಿ ಸಂಸ್ಥೆ ಗುರಿಯಾಗಿದೆ. ಈ ಸಂಸ್ಥೆ ಸಾವಿರಾರು ಮಂದಿಗೆ ಅನ್ನ ನೀಡುತ್ತಿದೆ. ಯಾವುದೇ ಭಟ್ಟಂಗಿ ಕೆಲಸ ಮಾಡದೆ ಪತ್ರಿಕಾ ಪಾವಿತ್ರ್ಯತೆ ಎತ್ತಿ ಹಿಡಿದು ಸರ್ಕಾರಗಳ ಮರ್ಜಿಗೆ ಒಳಗಾಗದೆ ಜನಪ್ರತಿನಿಗಳ ಒಳ್ಳೆಯ ಕೆಲಸಗಳನ್ನು ಪ್ರೋ ತ್ಸಾಹಿಸಿ ಅವರ ಕೆಟ್ಟ ಕೆಲಸಗಳನ್ನು ಆಕ್ಷೇಪಿಸಿ ಬದ್ಧತೆ ಪ್ರದರ್ಶಿಸಿದೆ.

ಕಲೆ, ಸಾಹಿತ್ಯ, ಸಿನಿಮಾ, ಧಾರ್ಮಿಕ, ಸಾಂಸ್ಕøತಿಕ ಹೂರಣವನ್ನು ಜನರಿಗೆ ನೀಡುತ್ತಾ ಬಂದಿದೆ ಈ ಸಂಜೆ. ಸಿನಿಮಾ ಮುಗ್ಗರಿಸಿದಾಗ ಎಚ್ಚರಿಸಿದೆ, ದಾರಿ ತಪ್ಪಿದಾಗ ಸರಿದಾರಿಯತ್ತ ಸಾಗಿಸಿದೆ. ಒಬ್ಬ ಗುರುವಿನಂತೆ ಈ ಸಂಜೆ ಕೆಲಸ ಮಾಡಿದೆ ಎಂಬ ಹೆಗ್ಗಳಿಕೆ ನಮ್ಮದು.

#  ಬೆಂಕಿಯಲ್ಲೂ ಅರಳಿದ ಈ ಸಂಜೆ : 
ಕೊರೊನಾದ ಬಿಕ್ಕಟ್ಟಿನ ಸನ್ನಿವೇಶದಲ್ಲೇ ಎದುರಾಯಿತು ಮತ್ತೊಂದು ಸಂಕಷ್ಟ. ಸೆಪ್ಟೆಂಬರ್ 19,2021ರಂದು ಸಂಜೆ 4.45 ಗಂಟೆ ಸುಮಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಈ ಸಂಜೆ ಕಚೇರಿ ಸಂಪೂರ್ಣ ಬೆಂಕಿಗೆ ಆಹುತಿಯಾಯಿತು.  ನೋಡ ನೋಡುತ್ತಿದ್ದಂತೆ ಕಟ್ಟಡ ತುಂಬೆಲ್ಲ ಆವರಿಸಿದ ಬೆಂಕಿಯ ಕೆನ್ನಾಲಿಗೆ ಪತ್ರಿಕೆಯ ದಾಖಲೆಗಳು, ಡೆಸ್ಕ್, ಪ್ರಿಂಟರ್, ಕಂಪ್ಯೂಟರ್‍ಗಳಾದಿಯಾಗಿ ಎಲ್ಲವೂ ಕಣ್ಣೆದುರೇ ಭಸ್ಮವಾಗಿ ಹೋದವು.

ಸಿಬ್ಬಂದಿ, ಆಡಳಿತ ಮಂಡಳಿ ಈ ಸನ್ನಿವೇಶದಿಂದ ಹೌಹಾರಿದರು, ಎಲ್ಲರೂ ದಿಕ್ಕುತೋಚದಂತಾದರು. ಕೊರೊನಾದಿಂದ ಚೇತರಿಸಿ ಕೊಂಡವರಿಗೆ ಮತ್ತೊಂದು ಆಘಾತ ಎದುರಾಗಿತ್ತು. ಆದರೆ, ಸಂಪಾದಕರು ಮಾತ್ರ ಎದೆಗುಂದದೆ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿದ್ದಲ್ಲದೆ ಎಲ್ಲರನ್ನೂ ಪ್ರೋತ್ಸಾಹಿಸಿದರು.

ಆ ಸಮಯದಲ್ಲಿ ಸಂಪಾದಕರು ಹೇಳಿದ ಧೈರ್ಯದ ನುಡಿಗಳು ಎಲ್ಲರನ್ನೂ ಮತ್ತೆ ಹುರಿದುಂಬಿಸಿತ್ತು. ಇದರ ಬಗ್ಗೆ ಯಾರೂ ಎದೆಗುಂದುವುದು ಬೇಡ ಎಂದ ಅವರು, ತಕ್ಷಣವೇ ಪರ್ಯಾಯ ವ್ಯವಸ್ಥೆ ಮಾಡಿದರು. ನಾಳೆ ಪತ್ರಿಕೆ ಬರಬೇಕು ಎಂದರು.
ಕಚೇರಿಗೆ ಹೊತ್ತಿದ್ದ ಬೆಂಕಿ ಇನ್ನೂ ಆರಿರಲಿಲ್ಲ. ಮರುದಿನ ನಮ್ಮ ಪತ್ರಿಕೆ ಹಲವು ಸವಾಲುಗಳನ್ನು ಮೆಟ್ಟಿನಿಂತು ಸೆ. 20ರಂದು ಸಂಚಿಕೆ ಹೊರಬಂತು. ಇದೇ ಈ ಸಂಜೆಯ ಅಂತಸ್ಸತ್ವ.

# ಓದುಗರಿಗೆ ನ್ಯಾಯ ಒದಗಿಸಿ : 
ಈ ಸಂಜೆ ಪತ್ರಿಕೆ ಕನ್ನಡಿಗರ ಪತ್ರಿಕೆಯಾಗಬೇಕು, ಕನ್ನಡಿಗರ ಧ್ವನಿಯಾಗಬೇಕೆಂಬ ನಿಟ್ಟಿನಲ್ಲಿ ಪತ್ರಿಕೆ ಪ್ರಾರಂಭಿಸಿದ್ದೇವೆ. ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡಿ, ಯಾರ ಮುಲಾಜಿಗೂ ಒಳಗಾಗಬೇಡಿ. 3ರೂ. ಕೊಟ್ಟು ಖರೀದಿಸುವ ಪತ್ರಿಕೆಯ ಓದುಗರಿಗೆ ನ್ಯಾಯ ಒದಗಿಸಿ ಎಂದು ಈ ಸಂಜೆ ಸಂಪಾದಕರು ಹಾಗೂ ಅಭಿಮಾನಿ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಸದಾ ಹೇಳುವ ಮಾತು.

ಯಾವಾಗಲೂ ಪತ್ರಿಕೆ ಸಂಕಷ್ಟದಲ್ಲಿರುವವರ ಪರವಾಗಿ ನಿಲ್ಲಬೇಕು. ಇದು ನಮ್ಮ ನಿಮ್ಮೆಲ್ಲರ ಧ್ವನಿಯಾಗಬೇಕು, ಶಕ್ತಿಯಾಗಬೇಕು ಎಂಬುದು ಅವರ ಅಭಿಮತ. ಅದನ್ನು ಅವರು ಪಾಲಿಸುತ್ತಾ ಬಂದಿದ್ದಾರೆ. ಪ್ರತಿನಿತ್ಯ ಅದನ್ನು ಬೋಸುತ್ತಾರೆ, ನಡೆ-ನುಡಿಯಲ್ಲೂ ರೂಢಿಸಿಕೊಂಡಿದ್ದಾರೆ.

#  ಕೊರೊನಾ ಸಂಕಷ್ಟದಲ್ಲೂ ಅಭಯ…
ಕೋವಿಡ್-19 ಸೋಂಕಿನಿಂದಾಗಿ ವಿಶ್ವವೇ ತಲ್ಲಣಗೊಂಡಿತ್ತು. ದೇಶದ ಜಂಘಾಬಲವೇ ಉಡುಗಿಹೋಗಿತ್ತು. ಕೊರೊನಾ ಲಾಕ್‍ಡೌನ್‍ನಿಂದಾಗಿ ಶತಮಾನ-ಅರ್ಧ ಶತಮಾನಗಳ ಇತಿಹಾಸದ ಹಿನ್ನೆಲೆಯ ಪತ್ರಿಕೆಗಳು ಮುಗ್ಗರಿಸಿಬಿಟ್ಟಿದ್ದವು. ವಿದ್ಯುನ್ಮಾನ ಮಾಧ್ಯಮಗಳ ಧ್ವನಿಯೂ ಕ್ಷೀಣಿಸಿತ್ತು.

ಎಷ್ಟೋ ಮಾಲೀಕರು ಪ್ರಸಾರವನ್ನು ಸೀಮಿತಗೊಳಿಸಿಬಿಟ್ಟರು. ಸಿಬ್ಬಂದಿಯನ್ನು ಕೈಬಿಟ್ಟು ವೆಚ್ಚ ತಗ್ಗಿಸಿಕೊಂಡರು. ಆದರೆ, ಈ ಸಂಜೆ ಸಿಬ್ಬಂದಿಯನ್ನು ಕೈ ಬಿಡಲಿಲ್ಲ, ಪ್ರಸಾರ ನಿಯಂತ್ರಿಸಲಿಲ್ಲ, ವೇತನ ಸಹ ನಿಲ್ಲಿಸಲಿಲ್ಲ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲೂ ಪತ್ರಿಕೆ ಯಥಾವತ್ತಾಗಿ ನಡೆದು ಅಂತಃಶಕ್ತಿಯನ್ನು ಅನಾವರಣಗೊಳಿಸಿತ್ತು.

# ಅಂತರ್ಜಾಲದಲ್ಲೂ ಸಂಚಲನ : 
ಅಂತರ್ಜಾಲದಲ್ಲೂ ಈ ಸಂಜೆ ಪತ್ರಿಕೆ ಯಶಸ್ಸು ಸಾಸಿದೆ. ದೇಶ-ವಿದೇಶಗಳಲ್ಲಿ ಓದುಗ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದೆ. ಕನ್ನಡ ಪತ್ರಿಕೆಗಳಲ್ಲಿ ಅಂತರ್ಜಾಲ ಓದುಗರಲ್ಲಿ ಐದನೆ ಸ್ಥಾನದಲ್ಲಿದೆ. ಬದಲಾದ ಕಾಲಕ್ಕೆ ತಕ್ಕಂತೆ ತಾಂತ್ರಿಕತೆಯನ್ನು ಮೈಗೂಡಿಸಿಕೊಂಡು ತನ್ನ ಚೈತ್ರಯಾತ್ರೆ ಮುಂದುವರೆಸಿದೆ. ಯಾವುದಕ್ಕೂ ಸೀಮಿತವಾಗದೆ ತನ್ನ ಪರಿಯನ್ನು ವಿಸ್ತಾರಗೊಳಿಸುತ್ತಾ ಸಾಗಿದೆ.

ಈ ಸಂಜೆಯ ತಾಜಾ ಸುದ್ದಿಗಳು 2್x47 ಮೊಬೈಲ್ ಆ್ಯಪ್‍ಗಳ ಮೂಲಕ ಓದುಗರನ್ನು ಕ್ಷಣಾರ್ಧದಲ್ಲಿ ತಲುಪುತ್ತಿವೆ. ವೆಬ್ ಚಾನಲ್‍ನಲ್ಲೂ ಈ ಸಂಜೆ ಮುಂಚೂಣಿಯಲ್ಲಿದೆ. ವೀಕ್ಷಕರ ಸಂಖ್ಯೆ ಲಕ್ಷ ದಾಟಿದೆ. ಪತ್ರಿಕೆಯ ಯಶಸ್ಸು ಕೇವಲ ಸಂಸ್ಥೆಯದ್ದಲ್ಲ, ಅದು ಓದುಗರು, ವಿತರಕರು,ಜಾಹೀರಾತುದಾರರು ಮತ್ತು ಸಮಸ್ತ ಜನತೆಯ ಅಭಿಮಾನ, ಪ್ರೋತ್ಸಾಹ, ಆಶೀರ್ವಾದ ಹಾರೈಕೆಗಳಿಂದ ಪತ್ರಿಕೆ ಮುನ್ನಡೆಯುತ್ತಿದೆ. ಓದುಗ ಪ್ರಭುಗಳಿಗೆ, ಅಭಿಮಾನಿ ಬಂಧುಗಳಿಗೆ ಪತ್ರಿಕೆ ಕೃತಜ್ಞತೆ ಸಲ್ಲಿಸುತ್ತದೆ.

Sri Raghav

Admin