ಬೆಂಗಳೂರು, ಆ.21- ಕೊಡಗಿನಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ದಾಳಿ ಪ್ರಕರಣದಲ್ಲಿ ಮತ್ತಷ್ಟು ಆರೋಪ ಪ್ರತ್ಯಾರೋಪಗಳು ಮುಂದುವರೆದಿವೆ. ರಾಜ್ಯ ಮತ್ತು ದೇಶದ ಪ್ರಮುಖ ಸಮಸ್ಯೆಗಳು ಮತ್ತೊಮ್ಮೆ ವಿಷಯಾಂತರವಾಗಿವೆ.
ಮೊಟ್ಟೆ ಎಸೆದ ಆರೋಪಿ ಸಂಪತ್ ಕಾಂಗ್ರೆಸ್ ಕಾರ್ಯಕರ್ತ ಎಂದು ಬಿಂಬಿಸಿದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಆತ ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೂ ಬಂಧನ ಮಾಡಿ ಕ್ರಮ ಕೈಗೊಳ್ಳುವ ಬದಲು ಹಿತ ರಕ್ಷಣೆ ಮಾಡುವ ಧಾವಂತ ಯಾಕೆ ಎಂದು ಪ್ರಶ್ನಿಸಿದೆ.
ಸಿದ್ದರಾಮಯ್ಯ ಕೊಡಗಿನಲ್ಲಿ ನೆರೆ ಹಾವಳಿಯನ್ನು ಪರಿಶೀಲನೆ ನಡೆಸಲು ಪ್ರವಾಸ ಕೈಗೊಂಡಾಗ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿ, ಪ್ರತಿಭಟನೆ ಮಾಡಿದರು. ಪ್ರತಿಪಕ್ಷದ ನಾಯಕರ ಪ್ರವಾಸಕ್ಕೆ ಅಡ್ಡಿ ಪಡಿಸುವ ಭರದಲ್ಲಿ ಮೊಟ್ಟೆಗಳನ್ನು ಎಸೆಯಲಾಗಿತ್ತು. ಮೊಟ್ಟೆ ಎಸೆದವ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಲಾಗಿದೆ. ಸಂಪತ್ ಕೂಡ ತನ್ನನ್ನು ತಾನು ಕಾಂಗ್ರೆಸ್‍ನ ನಿಷ್ಠಾವಂತ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾರೆ.
ಸಿದ್ದರಾಮಯ್ಯ ಅವರು ಕೊಡಗಿನ ಬಗ್ಗೆ ನೀಡಿದ ಹೇಳಿಕೆ ಇಷ್ಟವಾಗಲಿಲ್ಲ. ಅದಕ್ಕಾಗಿ ಮೊಟ್ಟೆ ಎಸೆದಿದ್ದೇನೆ. ನಾನೇನು ದೇಶದ್ರೋಹದ ಕೆಲಸ ಮಾಡಿಲ್ಲ. ಈಗ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾರೆ.
ಈ ಕ್ಷಣದವರೆಗೂ ಸಂಪತ್ತು ತನ್ನನ್ನು ಕಾಂಗ್ರೆಸ್ ಕಾರ್ಯಕರ್ತ ಎಂದು ಪ್ರತಿಪಾದಿಸುತ್ತಲೇ ಸಿದ್ದರಾಮಯ್ಯ ಅವರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ನಾನು ಮಾಜಿ ಸಚಿವ ಜೀವಿಜಯ ಅವರ ಕಟ್ಟಾ ಬೆಂಬಲಿಗ. ಅವರೊಂದಿಗೆ ಕಾಂಗ್ರೆಸ್ ಸೇರಿದ್ದೇನೆ ಎಂದಿದ್ದಾರೆ.
ಜೀವಿಜಯ ಕಾಂಗ್ರೆಸ್ ಸೇರಿದ್ದೆ ಏಳು ತಿಂಗಳ ಹಿಂದೆ ಕಾಂಗ್ರೆಸ್ ಸೇರಿದ್ದರು. ಸಂಪತ್ ಹೇಳಿಕೆ ನೀಡುವಾಗ, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಾನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ಪಕ್ಷಕ್ಕೆ ಚುನಾವಣೆ ಸಮಯದಲ್ಲಿ ನಾನು ಬೇಕು. ಉಳಿದ ಸಮಯದಲ್ಲಿ ಬೇಡವೇ ಎಂಬ ಪ್ರಶ್ನೆಯನ್ನು ಸಂಪತ್ ಮುಂದಿಟ್ಟಿದ್ದಾರೆ. ಅಚ್ಚರಿ ಎಂದರೆ ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೂ ಕೊಡಗು ಜಿಲ್ಲೆಯ ಕಾಂಗ್ರೆಸ್ ನಾಯಕರು ತುಟಿ ಬಿಚ್ಚದೆ ಮೌನಕ್ಕೆ ಶರಣಾಗಿದ್ದಾರೆ.
ಇದೇ 26ರಂದು ಕೊಡಗಿನಲ್ಲಿ ಬಹೃತ್ ಪ್ರತಿಭಟನೆ ಆಯೋಜಿಸಲಾಗಿದೆ. ಮೊಟ್ಟೆ ಪ್ರಕರಣದ ಬಗ್ಗೆ ರಾಜ್ಯಮಟ್ಟದ ನಾಯಕರೆ ಸದ್ದು ಮಾಡುತ್ತಿದ್ದು, ಪಕ್ಷ ಕೆಳ ಹಂತದ ಕಾರ್ಯಕರ್ತರನ್ನು ನಿರ್ಲಕ್ಷ್ಯಿಸುತ್ತಿದೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ.
ಕೆಪಿಸಿಸಿ ತನ್ನ ಟ್ವೀಟ್‍ನಲ್ಲಿ ಮೊಟ್ಟೆ ಎಸೆದ ಆರೋಪಿ ಸಂಪತ್ ಶಾಸಕ ಅಪ್ಪಚ್ಚು ರಂಜನ್ ಜೊತೆ ಇರುವ ಮತ್ತು ಗಣವೇಶದಲ್ಲಿ ಸಂಘ ಪರಿವಾರದ ಕವಾಯತ್‍ನಲ್ಲಿ ಭಾಗವಹಿಸಿರುವ ಫೋಟೋಗಳನ್ನು ಹಂಚಿಕೊಂಡಿದೆ.
ಬಿಜೆಪಿ ಮತ್ತು ಆರ್‍ಎಸ್‍ಎಸ್ ತನ್ನ ಅಜೆಂಡಾ ಸ್ಥಾಪಿಸಲು ತಮ್ಮಲ್ಲಿನ ಮುಗ್ದ ಕಾರ್ಯಕರ್ತರಿಗೆ ಯಾವ ವೇಷ ಬೇಕಾದರೂ ಹಾಕಿ ಕಳಿಸುತ್ತದೆ, ಯಾವ ಕೃತ್ಯಗಳನ್ನು ಬೇಕಿದ್ದರೂ ಮಾಡಿಸುತ್ತದೆ. ಕೊನೆಗೆ ಅವರನ್ನೇ ಕೊಂದು ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತವೆ. ಆರ್‍ಎಸ್‍ಎಸ್ ಪ್ಯಾಂಟ್ ತೊಟ್ಟವನಿಗೆ ಕಾಂಗ್ರೆಸ್ ವೇಷ ತೋಡಿಸಿದ ಮಾತ್ರಕ್ಕೆ ಕಾಗೆ ನವಿಲಾಗುತ್ತದೆಯೇ ಎಂದು ಪ್ರಶ್ನಿಸಲಾಗಿದೆ.
ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ, ಬಿಜೆಪಿಯ ಇಂತಹ ನಾಟಕಗಳೆಲ್ಲಾ ಹಳತಾಗಿವೆ. ಮೊಟ್ಟೆ ಎಸೆದವ ಕಾಂಗ್ರೆಸ್ ಪಕ್ಷದವನಾಗಿದ್ದರೆ ಅವನನ್ನು ಮೊದಲು ಜೈಲಿಗೆ ಕಳಿಸಿ, ನಿಮಗ್ಯಾಕೆ ಅವನ ಹಿತರಕ್ಷಣೆಯ ಉಸಾಬರಿ ಎಂದು ಕಿಡಿಕಾರಿದ್ದಾರೆ.
ಆಪರೆಷನ್ ಕಮಲ ಎಂದರೆ ಶಾಸಕರಿಗೆ ಮಾತ್ರ ಎಂದು ತಿಳಿದುಕೊಂಡಿದ್ದೇವು. ಈಗ ಬೀದಿಪುಂಡರ ಆಪರೇಷನ್ ಕಮಲ ಕೂಡಾ ನಡೆಸುತ್ತದೆ ಎಂದು ಮಡಕೇರಿಯಲ್ಲಿ ಸಾಬೀತಾಗಿದೆ. ಮೊಟ್ಟೆ ಎಸೆದವರನ್ನು ಶಾಸಕ ಅಪ್ಪಚ್ಚು ರಂಜನ್ ರಾತ್ರೋರಾತ್ರಿ ಪೆÇಲೀಸ್ ಠಾಣೆಗೆ ಹೋಗಿ ಬಿಡಿಸಿಕೊಂಡು ಬಂದಿದ್ದೇಕೆ.
ಮೊಟ್ಟೆ ಎಸೆದ ಆರೋಪಿಯನ್ನು ಸ್ಥಳದಲ್ಲೇ ಕುಶಾಲ್‍ನಗರ ಪೊಲೀಸ್‍ಠಾಣೆಯ ಪಿಎಸ್‍ಐ ಚಂದ್ರಶೇಖರ್ ಸ್ಥಳದಲ್ಲೇ ಬಂಸಿದ್ದಾರೆ. ಆದರೂ ಶಾಸಕರು ಸಂಪತ್ ತಲೆ ಮರೆಸಿಕೊಂಡಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ, ನಿನ್ನೆ ಬಂಧನ, ನಂತರ ಜಾಮೀನ ಮೇಲೆ ಬಿಡುಗಡೆ ಮಾಡಿಸಿದ ನಾಟಕ ಸೃಷ್ಟಿಸಲಾಗಿದೆ. ಒಂದು ಸುಳ್ಳನ್ನು ಸತ್ಯ ಮಾಡಲು ಇಷ್ಟೆಲ್ಲಾ ನಾಟಕ ಬೇಕೆ ಎಂದು ಪ್ರಶ್ನಿಸಿದ್ದಾರೆ.
ಪ್ರಕರಣದಲ್ಲಿ ಹಿಂದುತ್ವದ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ. ಬಿಜೆಪಿ ಕೂಡ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಪಕ್ಷ ಬಾಣಲೆಯಿಂದ ಬೆಂಕಿಯಿಂದ ಬಿದ್ದಿದೆ. ಸಿದ್ದರಾಮಯ್ಯ ಅವರ ಹಿಂದು ಹೇಳಿಕೆಗಳ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರೆ ಬಿದಿಗೆ ಇಳಿದಿದ್ದಾರೆ. ಬಿಜೆಪಿ ನಾಯಕರು, ಸಚಿವರ ಪ್ರವಾಸಕ್ಕೆ ಅಡ್ಡಿ ಪಡಿಸುವ ಬೆದರಿಕೆ ಹಾಕುತ್ತಿರುವ ಕಾಂಗ್ರೆಸ್ ನಾಯಕರೇ ಮೊದಲು ಹಿಂದು ವಿರೋ ಹೇಳಿಕೆಗಳನ್ನು ನಿಲ್ಲಿಸಿ ಎಂದು ತಿರುಗೇಟು ನೀಡಿದೆ.
ಇಲ್ಲಿ ವಿರೋಧ ಪಕ್ಷದ ನಾಯಕರ ಭದ್ರತೆಯ ವಿಷಯ ಪ್ರಮುಖ ಎಂಬುದನ್ನು ಅಲ್ಲಗಳೆಯಲಾಗದು. ಅದರ ಜೊತೆಗೆ ನೆರೆ ಸಂತ್ರಸ್ಥರ ಸಮಸ್ಯೆಗಳ ಬಗ್ಗೆ ಎಲ್ಲಿಯೂ ಚರ್ಚೆಯಾಗುತ್ತಿಲ್ಲ. ಕೇಂದ್ರದಿಂದ ಬರಬೇಕಾದ ಅನುದಾನ ಕೊರೆತೆಯಾಗಿರುವುದು, ನೆರೆಯಿಂದಾಗಿರುವ ನಷ್ಟದ ವರದಿಯನ್ನು ಕೇಂದ್ರಕ್ಕೆ ಸಲ್ಲಿಸುವ ಕುರಿತಾದ ವಿಳಂಬಗಳ ಬಗ್ಗೆ ಚರ್ಚೆಯೇ ನಡೆಯುತ್ತಿಲ್ಲ.
ಸುಮಾರು 14 ಸಾವಿರ ಸರ್ಕಾರಿ ಶಾಲೆಗಳನ್ನು ವಿದ್ಯಾರ್ಥಿಗಳ ಕೊರತೆಯ ಕಾರಣಕ್ಕೆ ವಿಲೀನ ಪ್ರಸ್ತಾವವಿದೆ. ಅದರ ಆಸ್ತಿಗಳನ್ನು ಮಾರಾಟಕ್ಕೆ ಇಡಲಾಗಿದೆ ಎಂಬ ಗಂಭೀರ ವಿಚಾರಗಳು ಮುನ್ನೆಲೆಗೆ ಬಂದೇ ಇಲ್ಲ. ನಿನ್ನೆ ಕೆಪಿಸಿಸಿ ಅಧ್ಯಕ್ಷರು ಬೆಂಗಳೂರಿನ ಚಿಕ್ಕಪೇಟೆಯಲ್ಲಿ ರಜತ ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿದ್ದ ಸರ್ಕಾರಿ ಶಾಲೆಯ ಪರಿಸ್ಥಿತಿಯನ್ನು ವಿಕ್ಷಣೆ ಮಾಡಿದ್ದಾರೆ.
ಬಿಬಿಎಪಿ ವ್ಯಾಪ್ತಿಯ ರಜತ ಮಾರುಕಟ್ಟೆ ಗುಜರಾತ್ ಮೂಲದ ವ್ಯಾಪಾರಿಗಳ ಖಾಸಗಿ ಸ್ವತ್ತಾಗಿ ಎಷ್ಟೋ ವರ್ಷಗಳಾಗಿವೆ. ಅಲ್ಲಿನ ಶಾಲಾ ಕೊಠಡಿಗಳನ್ನು ಬಟ್ಟೆ ಅಂಗಡಿಯ ಸಗಟ್ಟು ಮಾರಾಟ ಕೇಂದ್ರವಾಗಿ ಮತ್ತು ಹೊಟೇಲ್‍ನ ರೂಂಗಳನ್ನಾಗಿ ಬದಲಾವಣೆ ಮಾಡಿ ತುಂಬಾ ವರ್ಷಗಳಾಗಿವೆ.
ಇದೇ ರೀತಿ ಸರ್ಕಾರಿ ಶಾಲೆಗಳ ಅದೇಷ್ಟೋ ಆಸ್ತಿಗಳು ಖಾಸಗಿ ಪಾಲಾಗಿವೆ. ಸರ್ಕಾರವೂ ಎಚ್ಚೇತ್ತುಕೊಂಡಿಲ್ಲ, ಪ್ರತಿಪಕ್ಷಗಳು ಚಕಾರವೆತ್ತುತ್ತಿಲ್ಲ. ಚುನಾವಣಾ ವರ್ಷವಾಗಿದ್ದರಿಂದ ಕೇವಲ ಭಾವನಾತ್ಮಕ ವಿಷಯಗಳ ಮೇಲೆಯೇ ರಾಜಕಾರಣ ಮಾಡಿ ಕಾಲಾಹರಣ ಮಾಡಲಾಗುತ್ತಿದೆ.