ಬೆಂಗಳೂರು,ಜು.27- ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಂಡಿ ರುವುದರಿಂದ ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಯೋಜನೆಯಡಿ ಈ ಬಾರಿ ಎಲ್ಲ ಸರ್ಕಾರಿ ಕಚೇರಿಗಳು, ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಲು ತೀರ್ಮಾನಿಸಲಾಗಿದೆ ಸರ್ಕಾರದ ಈ ನಿರ್ಧಾರಕ್ಕೆ ಯಾರು ಆಕ್ಷೇಪ ವ್ಯಕ್ತಪಡಿಸುವಂತಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದಿಲ್ಲಿ ತಿಳಿಸಿದರು.
ಇಡೀ ಬೆಂಗಳೂರಿನಲ್ಲಿ ತ್ರಿವರ್ಣ ಧ್ವಜ ಹಾರಿಸಲು ನಿರ್ಧರಿಸಿರುವುದರಿಂದ 10 ಲಕ್ಷ ಧ್ವಜ ಮಾರಾಟದ ಗುರಿ ಹೊಂದಿದ್ದೇವೆ. ಜನರಿಗೆ ಧ್ವಜ ಹಂಚುವ ಜವಬ್ದಾರಿಯನ್ನು ನಾನು ಅಧಿಕಾರಿಗಳಿಗೆ ವಹಿಸಿದ್ದೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ನಮ್ಮ ಬಳಿ 2 ಲಕ್ಷ ಧ್ವಜಗಳಿವೆ. ಉಳಿದ ಧ್ವಜಗಳ ತಯಾರಿಕೆ ಕಾರ್ಯ ಭರದಿಂದ ಸಾಗುತ್ತಿದೆ. ಆಯಾ ವಲಯಗಳ ಜಂಟಿ ಆಯುಕ್ತರುಗಳು ಹಾಗೂ ಕಂದಾಯ ವಿಭಾಗದ ಅಧಿಕಾರಿಗಳು ಮನೆ ಮನೆಗಳಿಗೆ ತೆರಳಿ ಧ್ವಜ ಹಂಚಲಿದ್ದಾರೆ ಎಂದು ಅವರು ವಿವರಣೆ ನೀಡಿದರು.
ಜನರಿಂದ ಹಣ ಸಂಗ್ರಹಿಸಿ ನಾವು ಧ್ವಜ ಮಾರಾಟ ಮಾಡಲು ತೀರ್ಮಾನಿಸಿದ್ದೇವೆ. ದೊಡ್ಡ ಧ್ವಜಕ್ಕೆ 25 ಹಾಗೂ ಸಣ್ಣ ಧ್ವಜಕ್ಕೆ 10 ರೂ. ನಿಗದಿಪಡಿಸಿದ್ದೇವೆ ಎಂದು ಅವರು ಹೇಳಿದರು. ಈ ಬಾರಿ ಎಲ್ಲ ಕಡೆ ಧ್ವಜ ಹಾರಾಡುವುದರಿಂದ ಅನಿವಾರ್ಯವಾಗಿ ಪಾಲಿಸ್ಟರ್ ಧ್ವಜ ಬಳಕೆ ಮಾಡುವಂತಹ ಸನ್ನಿವೇಶ ನಿರ್ಮಾಣವಾಗಿದೆ ಎಂದು ಅವರು ಸಮರ್ಥಿಸಿಕೊಂಡರು.
ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದವನ್ನು ಅದಷ್ಟು ಬೇಗ ಪರಿಹರಿಸಿ ಆ ಮೈದಾನದಲ್ಲೂ ರಾಷ್ಟ್ರ ಧ್ವಜ ಹಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವುದಕ್ಕೂ ಹಕ್ಕುದಾರರು ಯಾರು ಅನ್ನುವುದಕ್ಕೂ ಯಾವುದೇ ಸಂಬಂಧವಿಲ್ಲ. ಸಾಧಕ ಬಾಧಕಗಳನ್ನು ಪರಿಶೀಲಿಸಿ ಜಂಟಿ ಆಯುಕ್ತರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತುಷಾರ್ ಗಿರಿನಾಥ್ ಹೇಳಿದರು.
ಫೀರ್‍ಪೌಂಡ್ರಿ ಮಸೀದಿ ಬಿಟ್ಟು ಉಳಿದ ಜಾಗದಲ್ಲಿ ಬೌಂಡರಿ ಹಾಕಲು ಬಿಬಿಎಂಪಿ ತೀರ್ಮಾನಿಸಿದೆ. ಬೌಂಡರಿ ಹಾಕುವ ಹೊಣೆಯನ್ನು ಏಜನ್ಸಿಯೊಂದಕ್ಕೆ ನೀಡಲಾಗಿದೆ ಎಂದು ಅವರು ವಿವರಣೆ ನೀಡಿದರು.
ಮಹತ್ವದ ಸಭೆ: ನಗರದಲ್ಲಿರುವ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ, ಅನುದಾನರಹಿತ ಶಾಲಾ ಕಾಲೇಜುಗಳು, ಮದರಸಾಗಳಲ್ಲಿ ಆ.11 ರಿಂದ 17ರವರೆಗೆ ರಾಷ್ಟ್ರಧ್ವಜ ಹಾರಿಸಲು ತೀರ್ಮಾನಿಸಿರುವುದರಿಂದ ಬಿಬಿಎಂಪಿಯಲ್ಲಿ ಜಿಲ್ಲಾಧಿಕಾರಿ, ಶ್ರೀನಿವಾಸ್, ಅಪರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಶ್ರೀನಿವಾಸ್‍ಗೌಡ ಮತ್ತಿತರರೊಂದಿಗೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಹತ್ವದ ಸಭೆ ನಡೆಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಧ್ವಜ ಪಡೆದು ನಗರದೆಲ್ಲೆಡೆ ಹಂಚಲು ಅನುಕೂಲವಾಗುವಂತೆ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಅವರನ್ನು ನೋಡಲ್ ಅಕಾರಿಯನ್ನಾಗಿ ನೇಮಕ ಮಾಡಲಾಗಿದೆ.