ಸಿಕಂದ್ರಬಾದ್‍ನಲ್ಲಿ ಧಗಧಗಿಸಿದ ಇ-ಬೈಕ್ ಶೋ ರೂಂ, 8 ಮಂದಿ ಸಾವು

Social Share

ಸಿಕಂದ್ರಬಾದ್, ಸೆ.13- ತೆಲಂಗಾಣದ ಸಿಕಂದ್ರಬಾದ್‍ನಲ್ಲಿ ಇ-ಬೈಕ್ ಶೋ ರೂಂನಲ್ಲಿ ಬೆಂಕಿ ಅನಾವುತ ಸಂಭವಿಸಿದ್ದು, ಕನಿಷ್ಠ ಎಂಟು ಮಂದಿ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.

ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಪಾಸ್‍ಪೋಟ್ ಕಚೇರಿ ಸಮೀಪ ಇರುವ ಇ-ಬೈಕ್ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ರಮೇಣ ಅಗ್ನಿಯ ಕೆನ್ನಾಲಿಗೆಗಳು ಶೋ ರೂಂ ಮೇಲಿನ ಮಹಡಿಯಲ್ಲಿರುವ ಲಾಡ್ಜ್ ಮತ್ತು ರೆಸ್ಟೋರೆಂಟ್‍ಗೂ ವ್ಯಾಪಿಸಿದೆ. ಹೋಟೆಲ್‍ನ ಸಿಬ್ಬಂದಿಗಳು ಮತ್ತು ಅತಿಥಿಗಳು ಬೆಂಕಿ ಮತ್ತು ಹೊಗೆಯನ್ನು ಕಂಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸುವ ವೇಳೆಗೆ ಬೆಂಕಿಯ ಜ್ವಾಲೆಗಳು ವ್ಯಾಪಕವಾಗಿ ಹರಡಿದ್ದವು. ಪೊಲಿಸರು ಪ್ರಾಥಮಿಕ ತನಿಖೆಯ ಪ್ರಕಾರ ಕೆಳಮಹಡಿಯಲ್ಲಿರುವ ಎಲೆಕ್ಟ್ರಾನಿಕ್ ಶೋರೂಂನ ಚಾರ್ಜಿಂಗ್ ಪಾಯಿಂಟ್‍ನಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸುಮಾರು 24 ಮಂದಿ ಸಿಲುಕಿಕೊಂಡಿದ್ದರು. ಅವರಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಸಂತ್ರಸ್ಥರಲ್ಲಿ ಬಹುತೇಕರು ಹೊರ ರಾಜ್ಯದವರಾಗಿದ್ದಾರೆ. ಉಳಿದವರನ್ನು ರಕ್ಷಿಸಲಾಗಿದೆ.

ಹೊಗೆ ಆವರಿಸಿಕೊಳ್ಳಲಾರಂಭಿಸುತ್ತಿದ್ದಂತೆ ಮೊದಲ ಮತ್ತು ಎರಡನೇ ಮಹಡಿಯಲ್ಲಿದ್ದವರು ಭಯದಿಂದ ಪ್ರಾಣ ರಕ್ಷಣೆಗಾಗಿ ಕೆಳಗಡೆಗೆ ಜಿಗಿದಿದ್ದಾರೆ. ಅವರನ್ನು ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿಗಳು ಉಪಚರಿಸಿ, ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಹೈದರಾಬಾದ್‍ನ ಪೊಲೀಸ್ ಆಯುಕ್ತ ಸಿ.ವಿ.ಆನಂದ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ತೆಲಂಗಾಣದ ಗೃಹ ಸಚಿವ ಮೊದ್ ಮಹಮದ್ ಅವರು ಘಟನೆಯ ಕುರಿತು ಪ್ರತಿಕ್ರಿಯಿಸಿದ್ದು, ಇದು ದುರಾದೃಷ್ಟಕರ ಪ್ರಕರಣ. ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದಾಗ ಭಾರೀ ಹೊಗೆ ಆವರಿಸಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿ ಕೆಲವರನ್ನು ರಕ್ಷಿಸಲಾಗಿದೆ. ಆ ಸಂದರ್ಭ ಸವಾಲಿನದಾಗಿತ್ತು, ಹೊಗೆಯಿಂದಾಗಿ ಕೆಲವರು ಮೃತಪಟ್ಟಿದ್ದಾರೆ. ಅನಾವುತಕ್ಕೆ ಕಾರಣಗಳೇನು ಎಂದು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದು, ಸಂತ್ರಸ್ಥರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

Articles You Might Like

Share This Article