ಮುಂಬೈ, ಆ.9 – ಮಹಾರಾಷ್ಟ್ರದಲ್ಲಿ ಮುಖ್ಯ ಮಂತ್ರಿ ಏಕನಾಥ್ ಶಿಂಧೆ ಅವರ ಬಹುನಿರೀಕ್ಷಿತ ಸಂಪುಟ ಇಂದು ವಿಸ್ತರಣೆ ಯಾಗಿದ್ದು, ಒಟ್ಟು 18 ಮಂದಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಏಕನಾಥ್ ಶಿಂಧೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ 41 ದಿನಗಳ ನಂತರ ಇಂದು ಸಚಿವ ಸಂಪುಟ ವಿಸ್ತರಿಸಿದ್ದಾರೆ. ಬಿಜೆಪಿಯಿಂದ 9 ಹಾಗೂ ಶಿಂಧೆ ಬಣದ 9 ಶಾಸಕರು ಇಂದು ಬೆಳಗ್ಗೆ ಮುಂಬೈನ ರಾಜ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ.
ಬಿಜೆಪಿಯಿಂದ ರಾಜ್ಯ ಪಕ್ಷದ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ, ಸುೀರ್ ಮುಂಗಂಟಿವಾರ್, ಗಿರೀಶ್ ಮಹಾಜನ್, ರಾಧಾಕೃಷ್ಣ ವಿಕೆ ಪಾಟೀಲï, ಸುರೇಶ್ ಖಾಡೆ, ಅತುಲ್ ಸಾವೆ, ಮಂಗಳ್ ಪ್ರಭಾತ್ ಲೋದಾ, ವಿಜಯ್ ಕುಮಾರ್ ಗವಿಟ್, ರವೀಂದ್ರ ಚೌಹಾನ್ ಸೇರ್ಪಡೆಯಾಗಿದ್ದಾರೆ.
ಶಿಂಧೆ ಬಣದಿಂದ ದಾಡಾ ಬುಸೆ, ಶಂಬುರಾಜಿ ದೇಸಾಯಿ, ಸಂದೀಪನ್ ಬೂರ್ಮೆ , ಉದಯ್ ಸಮಂತ್ , ತಾನಾಜಿ ಸಾವಂತ್, ಅಬ್ದುಲ್ ಸತ್ತಾರ್, ದೀಪಕ್ ಕೆಸರ್ಕರ್ , ಗುಲಾಬ್‍ರಾವ್ ಪಾಟೀಲ್ ಮತ್ತು ಸಂಜಯ್ ರಾತೋಡ್ ಅವರು ಸಂಪುಟ ಸಚಿವರಾಗಿ ಪ್ರತಿಜ್ಞಾವಿ ಸ್ವೀಕರಿಸಿದ್ದಾರೆ.
ಅಳೆದು ತೂಗಿ ಹಿರಿಯ ಹಾಗು ಕಿರಿಯರ ಸಮ್ಮಿಲನದ ಸಚಿವ ಸಂಪುಟ ಇದಾಗಿದ್ದು, ಮುಂದಿನ ತಿಂಗಳು ಮತ್ತೊಮ್ಮೆ ಸಂಪುಟ ವಿಸ್ತರಣೆ ಯಾಗಲಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಸಿಎಂ ಶಿಂಧೆ ಏಳು ಬಾರಿ ನವ ದೆಹಲಿಗೆ ಭೇಟಿ ನೀಡಿ, ಚರ್ಚೆ ನಡಸಿದ್ದರು. ಅಂತೂ ಇಂತೂ ಇಂದು ಸಂಪುಟ ವಿಸ್ತರಣೆಯಾಗಿ ಖಾತೆಗಳ ಹಂಚಿಕೆ ಕೂಡ ಪಕ್ಕಾ ಆಗಿದೆ.
ಡಿಸಿಎಂ ಫಡ್ನವೀಸ್ ಅವರು, ಗೃಹ ಖಾತೆಯನ್ನು ವಹಿಸಿಕೊಂಡರೆ ಬಿಜೆಪಿ ಪಾಳೆಯದಲ್ಲಿ ಆರ್ಥಿಕ ಇಲಾಖೆ , ಲೋಕೋಪಯೋಗಿ ಇರಲಿದ್ದು, ಶಿಂಧೆ ಬಳಗಕ್ಕೆ ಜಲಸಂಪನ್ಮೂಲ ಇಂಧನ ದಂತಹ ಪ್ರಮುಖ ಖಾತೆಗಳು ದೊರೆಯಲಿವೆ.