ರಾಜ್ಯದಲ್ಲಿ ಉಪಚುನಾವಣೆ ನಡೆಸದಿರಲು ಆಯೋಗ ನಿರ್ಧಾರ ..?

Social Share

ಬೆಂಗಳೂರು,ನ.7- ಮಾಜಿ ಸಚಿವ ಉಮೇಶ್ ಕತ್ತಿ ಹಾಗೂ ವಿಧಾನಸಭೆಯ ಉಪಾಧ್ಯಕ್ಷ ಆನಂದ್ ಮಾಮನಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮತ್ತು ಸವದತ್ತಿಯಲ್ಲಮ್ಮ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸದಿರಲು ಕೇಂದ್ರ ಚುನಾವಣೆ ಆಯೋಗ ನಿರ್ಧರಿಸಿದಂತಿದೆ.

ಬರುವ ವರ್ಷದ ಮೇ ತಿಂಗಳಲ್ಲಿ ರಾಜ್ಯವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಕೇಂದ್ರ ಚುನಾವಣೆ ಆಯೋಗ ಈ ತೀರ್ಮಾನಕ್ಕೆ ಬಂದಿದೆ ಎಂದು ಹೇಳಲಾಗಿದೆ. ಸಚಿವರಾಗಿದ್ದ ಉಮೇಶ ಕತ್ತಿ ಮತ್ತು ವಿಧಾನಸಭೆ ಉಪಾಧ್ಯಕ್ಷರಾಗಿದ್ದ ಆನಂದ ಚಂದ್ರಶೇಖರ ಮಾಮನಿ ಅವರ ಅಗಲಿಕೆಯಿಂದ ತೆರವಾಗಿರುವ ಹುಕ್ಕೇರಿ ಮತ್ತು ಸವದತ್ತಿಯಲ್ಲಮ್ಮ ವಿಧಾನಸಭೆ ಕ್ಷೇತ್ರಗಳಿಗೆ ಕೇಂದ್ರ ಚುನಾವಣೆ ಆಯೋಗ ವಾಡಿಕೆಯಂತೆ ಉಪ ಚುನಾವಣೆ ನಡೆಸಬೇಕಿತ್ತು.

ಉಪಚುನಾವಣೆ ನಡೆದ ಕೆಲವೇ ತಿಂಗಳಲ್ಲಿ ಈ ಎರಡೂ ಕ್ಷೇತ್ರಕ್ಕೆ ಮತ್ತೆ ಸಾರ್ವತ್ರಿಕ ಚುನಾವಣೆ ನಡೆಸಬೇಕಾಗಿರುವುದರಿಂದ ಉಪ ಚುನಾವಣೆಯ ನಡೆಸುವ ಬಗ್ಗೆ ಕೇಂದ್ರ ಚುನಾವಣೆ ಆಯೋಗ ಹೆಚ್ಚು ಆಸಕ್ತಿ ವಹಿಸಿಲ್ಲ ಎನ್ನಲಾಗಿದೆ.

ಸಾಮಾನ್ಯವಾಗಿ ಹಾಲಿ ಶಾಸಕರ ರಾಜೀನಾಮೆಯಿಂದ ತೆರವಾದ ಅಥವಾ ಶಾಸಕರ ನಿಧನದಿಂದ ಖಾಲಿಯಾಗುವ ವಿಧಾನಸಭೆ ಕ್ಷೇತ್ರಕ್ಕೆ ಆರು ತಿಂಗಳೊಳಗೆ ಚುನಾವಣೆ ನಡೆಸುವುದು ಕೇಂದ್ರ ಚುನಾವಣೆ ಆಯೋಗದ ನಿಯಮದ ಪ್ರಕಾರ ಕಡ್ಡಾಯವಾಗಿದೆ.

ಹನಿಟ್ರ್ಯಾಪ್‍ಗೆ ಸಿಲುಕಿದ ಹಾಲಿನ ಬೂತ್‍ಮಾಲೀಕ, ಮಾಯಾಂಗನೆ ಅರೆಸ್ಟ್

ಆದರೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೇವಲ 7 ತಿಂಗಳು ಬಾಕಿಯಿರುವಾಗ ಉಪಚುನಾವಣೆ ನಡೆಸುವುದು ಎಷ್ಟು ಸಮಂಜಸ ಎಂಬ ಕಾರಣಕ್ಕೆ ಕೇಂದ್ರ ಚುನಾವಣೆ ಆಯೋಗ ಹುಕ್ಕೇರಿ ಮುತ್ತು ಸವದತ್ತಿಯಲ್ಲಮ್ಮ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಮಾಡದಿರುವ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ಹುಕ್ಕೇರಿ ಹಾಗೂ ಸವದತ್ತಿ ಕ್ಷೇತ್ರಗಳಿಗೆ ಉಪಚುನಾವಣೆ ವೇಳಾಪಟ್ಟಿ ಪ್ರಕಟಿಸದಿರುವ ಸಂಗತಿಯು ಉಪಚುನಾವಣೆ ಬದಲಿಗೆ ಸಾವ್ರರ್ತಿಕ ಚುನಾವಣೆ ನಡೆಸಲು ಆಯೋಗದ ತೀರ್ಮಾನವನ್ನು ಖಚಿತಪಡಿಸುತ್ತಿದೆ.

ಬೇರೆ ರಾಜ್ಯಗಳ ವಿಧಾನಸಭೆಗೆ ಕೇಂದ್ರ ಚುನಾವಣೆ ಆಯೋಗ ಡಿಸೆಂಬರ್ ಮೊದಲ ವಾರ ಚುನಾವಣೆ ನಡೆಸುತ್ತಿದ್ದು, ಈ ಪ್ರಕಾರ ರಾಜ್ಯದ ಹುಕ್ಕೇರಿ ಮತ್ತು ಸವದತ್ತಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸಿದರೂ ಹೊಸದಾಗಿ ಶಾಸಕರಾಗಿ ಆಯ್ಕೆಯಾಗಿ ಬಂದ ಅಭ್ಯರ್ಥಿಗಳಿಗೆ ಐದು ತಿಂಗಳಾದರೂ ಶಾಸಕರಾಗಿ ಸೇವೆ ಸಲ್ಲಿಸಲು ಅವಕಾಶ ಸಿಗುತ್ತಿತ್ತು.

ರಾಜಕೀಯ ಪಕ್ಷಗಳಿಗೂ ನಿರಾಸಕ್ತಿ: ಹುಕ್ಕೇರಿ ಮತ್ತು ಸವದತ್ತಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಬಗ್ಗೆ ರಾಜಕೀಯ ಪಕ್ಷಗಳಿಗೂ ನಿರಾಸಕ್ತಿ ಇದೆ. ಕೆಲವೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವುದರಿಂದ ಉಪಚುನಾವಣೆ ನಡೆಸುವ ಅಗತ್ಯತೆ ಇಲ್ಲ ಎಂಬ ಅಭಿಪ್ರಾಯ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳದ್ದಾಗಿವೆ. ಎರಡೂ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸಿತ್ತು.

ಕೃಷಿ ಮೇಳಕ್ಕೆ ಇಂದು ತೆರೆ, ಹರಿದುಬಂದ ಜನಸಾಗರ

ಉಪಚುನಾವಣೆ ಎದುರಿಸುವ ಕುರಿತು ರಾಜಕೀಯ ಪಕ್ಷಗಳೂ ಸಹ ಹೆಚ್ಚು ಗಮನಹರಿಸಿಲ್ಲ. ಸಾಮಾನ್ಯ ಚುನಾವಣೆ ಕಡೆಯೇ ಹೆಚ್ಚಿನ ಗಮನವಹಿಸಿದ್ದರಿಂದ ಉಪ ಚುನಾವಣೆ ನಡೆಸದಿರುವ ಕೇಂದ್ರ ಚುನಾವಣೆ ಆಯೋಗದ ಕ್ರಮವನ್ನು ಯಾವ ಪಕ್ಷಗಳೂ ಪ್ರಶ್ನಿಸುತ್ತಿಲ್ಲ.

Articles You Might Like

Share This Article