ಶಿಂಧೆ-ಉದ್ಧವ್ ಬಣಕ್ಕೆ ಚುನಾವಣಾ ಆಯೋಗ ನೋಟಿಸ್

Social Share

ನವದೆಹಲಿ,ಜು.23-ಬಹುಮತ ಸಾಬೀತಪಡಿಸಲು ಅಗತ್ಯವಿರುವ ದಾಖಲೆಗಳನ್ನು ಆ.8ರೊಳಗೆ ಸಲ್ಲಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಶಿವಸೇನೆ ನಾಯಕ ಉದ್ದವ್ ಠಾಕ್ರೆ ಅವರಿಗೆ ನೋಟಿಸ್ ನೀಡಿದೆ.

ಶಿವಸೇನೆ ಪಕ್ಷದ ನಾಯಕತ್ವ ಯಾರು ವಹಿಸಬೇಕು ಎಂಬ ಬಗ್ಗೆ ಉದ್ದವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳ ನಡುವೆ ನಡೆಯುತ್ತಿರುವ ಮೇಲಾಟದ ಬೆಳವಣಿಗೆ ಮತ್ತೊಂದು ಹಂತಕ್ಕೆ ಬಂದು ತಲುಪಿದ್ದು, ಪೂರಕ ದಾಖಲೆಗಳನ್ನು ಸಲ್ಲಿಸಿದ ನಂತರ ಚುನಾವಣಾ ಆಯೋಗ ಈ ಎರಡೂ ಬಣಗಳ ವಾದವನ್ನು ಆಲಿಸಲಿದೆ.

ಶಿಂಧೆ ನೇತೃತ್ವದಲ್ಲಿ ಬಂಡಾಯವೆದಿದ್ದ 40 ಶಾಸಕರು ತಮ್ಮದು ಪ್ರತ್ಯೇಕ ಬಣ ಎಂದು ಘೋಷಿಸಿಕೊಂಡು ಬಿಜೆಪಿ ಬೆಂಬಲದೊಂದಿಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದ್ದರು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾದರು.

ಚುನಾವಣಾ ಆಯೋಗಕ್ಕೆ ಈ ಸಂಬಂಧ ಪತ್ರವನ್ನು ಬರೆದಿದ್ದ ಶಿಂಧೆ ಬಣವು ಮಹಾರಾಷ್ಟ್ರ ವಿಧಾನಸಭೆಯ 55 ಶಿವಸೇನೆ ಶಾಸಕರ ಪೈಕಿ 40 ಶಾಸಕರು 18 ಲೋಕಸಭಾ ಸದಸ್ಯರ ಪೈಕಿ 12 ಮಂದಿ ಬೆಂಬಲ ನಮಗಿದೆ ಎಂದು ಘೋಷಿಸಿಕೊಂಡಿತು.

ಶಿವಸೇನೆ ಹೋಳಾಗಿರುವುದು ಇದರಿಂದ ಸ್ಪಷ್ಟವಾಗಿದೆ. ಈ ಎರಡೂ ಬಣಗಳು ನಮ್ಮದೇ ನಿಜವಾದ ಶಿವಸೇನೆ ಎಂದು ಪಕ್ಷದ ಚಿಹ್ನೆಯ ಹಕ್ಕು ಪ್ರತಿಪಾದನೆ ಮಂಡಿಸಿವೆ. ತಮ್ಮ ಬಣದ ನಾಯಕನೇ ಪಕ್ಷದ ನಾಯಕ ಎಂದು ಪ್ರತಿಪಾದಿಸಿವೆ ಎಂದು ಚುನಾವಣಾ ಆಯೋಗ ನೋಟಿಸ್‍ನಲ್ಲಿ ವಿವರಿಸಿದೆ.

ಎರಡೂ ಬಣಗಳಿಗೆ ಸೇರಿದವರ ಹಕ್ಕು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಬೇಕಾಗಿದ್ದು, ಇಂಥ ಪ್ರಕರಣಗಳಲ್ಲಿ ಈ ಹಿಂದೆ ನಡೆಸಿದ್ದ ಪ್ರಕ್ರಿಯೆಗಳನ್ನು ಗಮನಿಸಿ ಚುನಾವಣಾ ಆಯೋಗ ಎರಡು ಬಣಗಳಿಗೆ ಲಿಖಿತ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದೆ.

Articles You Might Like

Share This Article