ಬೆಂಗಳೂರು,ಜ.29- ಚುನಾವಣೆ ವ್ಯವಸ್ಥೆ ಸುಧಾರಣೆಗೆ ಸಾಮೂಹಿಕ ಚರ್ಚೆ ನಡೆಸಬೇಕಾದ ಅಗತ್ಯವಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗವು ಯಾಂತ್ರಿಕವಾಗಿ ಚುನಾವಣೆ ನಡೆಸಲಷ್ಟೇ ಸುಧಾರಣೆ ತರಲು ಪ್ರಯತ್ನ ಮಾಡಬೇಕು. ಅದು ತನ್ನ ಜವಾಬ್ದಾರಿಯನ್ನು ಹೆಚ್ಚಿಸಿಕೊಳ್ಳಬೇಕು.
ಜಾತಿ, ಹಣ, ತೋಳ್ಬಲ, ಪಕ್ಷಾಂತರ ಪಿಡುಗಿನಿಂದ ವ್ಯವಸ್ಥೆ ಹದಗೆಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಹೀಗಾಗಿ ಈ ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಎಲ್ಲಾ ಅನುಭವಿಗಳು ಪ್ರಯತ್ನ ಮಾಡಬೇಕು. ಈ ಬಗ್ಗೆ ವ್ಯಾಪಕ ಚರ್ಚೆಯು ಆಗಬೇಕು.
ರಾಜಕೀಯ ಪಕ್ಷಗಳ ಕಡೆ ಬೊಟ್ಟು ಮಾಡಿ ತೋರಿದರೆ ಸಾಲದು. ತಮ್ಮ ತಮ್ಮ ಜವಾಬ್ದಾರಿ ಅರಿತು ಸುಧಾರಣೆ ತರಲು ಪ್ರಯತ್ನ ಮಾಡಬೇಕು. ಯುವ ಸಮುದಾಯ ವ್ಯವಸ್ಥೆಯ ಕಾವಲುಗಾರರಾಗದಿದ್ದರೆ ಭವಿಷ್ಯ ಪ್ರಪಾತಕ್ಕೆ ಬೀಳಲಿದೆ. ಹೀಗಾಗಿ ಯುವ ಸಮುದಾಯದ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದರು.
ಈ ಚುನಾವಣೆ ವ್ಯವಸ್ಥೆ ಸುಧಾರಣೆ ಕುರಿತಂತೆ ವಿಧಾನಸಭೆಯಲ್ಲಿ ಚರ್ಚೆ ಮಾಡಲು ಮುಕ್ತ ಮನಸ್ಸು ಹೊಂದಿರುವುದಾಗಿ ಹೇಳಿದರು. ಅತಂತ್ರ ವಿಧಾನಸಭೆ ನಿರ್ಮಾಣವಾಗದಂತೆ ಸ್ಪಷ್ಟ ಬಹುಮತ ಬರುವಂತಹ ಜವಾಬ್ದಾರಿ ನಿರ್ವಹಿಸುವುದು ಕೂಡ ಜನರ ಮೇಲಿದೆ. ವ್ಯವಸ್ಥೆ ಸುಧಾರಣೆಗಾಗಿ ನಿರಂತರ ಪ್ರಯತ್ನವಾಗಬೇಕು. ಈಗಾಗಲೇ 17 ಲೋಕಸಭೆ, 15 ವಿಧಾನಸಭೆ ಚುನಾವಣೆಗಳು ಸೇರಿದಂತೆ ವಿವಿಧ ಚುನಾವಣೆಗಳನ್ನು ನೋಡಿದ್ದೇವೆ. ವ್ಯವಸ್ಥೆ ಸುಧಾರಣೆಯಾಗಬೇಕು ಎಂಬುದರ ಬಗ್ಗೆ ಎಲ್ಲರೂ ಪ್ರಸ್ತಾಪ ಮಾಡುತ್ತಾರೆ.
ನಾವು ದೇಶದ ಸ್ವಾತಂತ್ರ್ಯ ಅಮೃತೋತ್ಸವ ಆಚರಣೆ ಮಾಡುತ್ತಿದ್ದೇವೆ. ಶತಮಾ ನೋತ್ಸವದ ವೇಳೆಗೆ ವ್ಯವಸ್ಥೆಯಲ್ಲಿನ ಲೋಪದೋಷಗಳು ನಿವಾರಣೆಯಾಗಬೇಕು. ವ್ಯವಸ್ಥೆ ಕಲುಷಿತಗೊಳಿಸದಂತೆ ಸರಿಪಡಿಸುವ ಜವಾಬ್ದಾರಿಯನ್ನು ರಾಜಕೀಯ ಪಕ್ಷಗಳು ನಿರ್ವಹಿಸಬೇಕು ಎಂದು ಅವರು ಹೇಳಿದರು.
ಶಾಸಕ ಎಂ.ಪಿ.ಕುಮಾರಸ್ವಾಮಿ ಮತ್ತು ಪೊಲೀಸರ ಸಂಘರ್ಷದ ವಿಚಾರದ ಬಗ್ಗೆ ಮಾಹಿತಿ ಪಡೆಯುವುದಾಗಿ ಇದೇ ಸಂದರ್ಭದಲ್ಲಿ ಅವರು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ಸಿ.ಆರ್.ಅಮರ್‍ನಾಥ್, ವಿಧಾನಸಭೆ ಪ್ರಭಾರ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಉಪಸ್ಥಿತರಿದ್ದರು.
