ಹುಣಸೂರು ಬಳಿ ದಾಖಲಾತಿ ಇಲ್ಲದ 2 ಕೋಟಿ ಹಣ ಪತ್ತೆ..!

Spread the love

ಮೈಸೂರು, ನ.27-ಸೂಕ್ತ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ ಎರಡು ಕೋಟಿ ಹಣವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹುಣಸೂರು ತಾಲೂಕು ಮನುಗನಹಳ್ಳಿ ಚೆಕ್‍ಪೋಸ್ಟ್ ಬಳಿ ಬೊಲೆರೋ ವಾಹನದಲ್ಲಿ ಮೂರು ಚೀಲಗಳಲ್ಲಿ ಎರಡು ಕೋಟಿ ರೂ.ಗಳನ್ನು ಸಾಗಿಸಲಾಗುತ್ತಿತ್ತು.

ಈ ಚೆಕ್‍ಪೋಸ್ಟ್‍ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ದಾಖಲೆ ಇಲ್ಲದ ಭಾರೀ ಹಣ ಸಿಕ್ಕಿದೆ. ಮೈಸೂರು ಜಿಲ್ಲಾ ಕ್ರೆಡಿಟ್ ಕೋ ಆಪರೇಟಿವ್ (ಎಂಡಿಸಿಸಿ) ಬ್ಯಾಂಕ್‍ಗೆ ಸೇರಿದ ಹಣ ಇದಾಗಿದ್ದು, ಇದನ್ನು ಪಿರಿಯಾಪಟ್ಟಣ ಬ್ರ್ಯಾಂಚ್‍ಗೆ ಸಾಗಿಸುತ್ತಿರುವುದಾಗಿ ಬೊಲೆರೋ ವಾಹನದಲ್ಲಿದ್ದ ಸಿಬ್ಬಂದಿ ತಿಳಿಸಿದ್ದಾರೆ.

ಚುನಾವಣಾಧಿಕಾರಿ ಪೂವಿಕಾ ಮತ್ತು ತಹಶೀಲ್ದಾರ್ ಬಸವರಾಜ್ ನೇತೃತ್ವದಲ್ಲಿ ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಹುಣಸೂರು ತಾಲೂಕು ಖಜಾನೆಯಲ್ಲಿ ಹಣವನ್ನು ಭದ್ರಪಡಿಸಲಾಗಿದೆ. ಆದರೆ ಬ್ಯಾಂಕ್‍ನ ಲೆಟರ್‍ಹೆಡ್ ಆಗಲಿ ಅಥವಾ ಎಂಡಿಸಿಸಿ ಬ್ಯಾಂಕ್‍ಗೆ ಸೇರಿದ್ದೆಂಬುದಕ್ಕೆ ಯಾವುದೇ ಸಾಕ್ಷಿ ಇರಲಿಲ್ಲ.

ಚುನಾವಣಾಧಿಕಾರಿಗಳ ಅನುಮತಿ ಪಡೆದಿರಲಿಲ್ಲ ಹಾಗೂ ಭದ್ರತಾ ಸಿಬ್ಬಂದಿಯೂ ಇಲ್ಲದೆ ಭಾರೀ ಮೊತ್ತದ ಹಣ ಸಾಗಿಸುತ್ತಿದ್ದುದು ಅನುಮಾನಕ್ಕೆ ಎಡೆಮಾಡಿದ್ದು ಚುನಾವಣಾಧಿಕಾರಿಗಳು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸೂಕ್ತ ದಾಖಲಾತಿ ತಂದು ಹಣವನ್ನು ಹಿಂಪಡೆಯುವಂತೆ ಕಾರ್‍ನಲ್ಲಿದ್ದ ಇಬ್ಬರು ಎಂಡಿಸಿಸಿ ನೌಕರರಿಗೆ ಚುನಾವಣಾಧಿಕಾರಿಗಳು ನೋಟೀಸ್ ನೀಡಿದ್ದಾರೆ.

Facebook Comments