ನವದೆಹಲಿ,ಮಾ.9- ದೇಶದ ಗಮನಸೆಳೆದಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಅಧಿಕಾರ ಹಿಡಿಯಲು ಈಗಾಗಲೇ ತೆರೆಮರೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಕಸರತ್ತು ಆರಂಭಿಸಿವೆ. ಕೇಂದ್ರ ಸರ್ಕಾರಕ್ಕೆ ಭಾರೀ ಸವಾಲಾಗಿದ್ದ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿದ ನಂತರ ನಡೆದಿದ್ದ ಮೊದಲ ಚುನಾವಣೆ ಇದಾಗಿದ್ದು, ಆಡಳಿತಾರೂಢ ಎನ್‍ಡಿಎ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಇತರೆ ಪ್ರಾದೇಶಿಕ ಪಕ್ಷಗಳಿಗೆ ಅತ್ಯಂತ ನಿರ್ಣಾಯಕ ಎನಿಸಿದೆ.
ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶ(401), ಉತ್ತರಖಂಡ್(70), ಮಣಿಪುರ(60), ಪಂಜಾಬ್(117) ಹಾಗೂ ಗೋವಾ(40) ರಾಜ್ಯಗಳ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಬೆಳಗ್ಗೆ 8 ಗಂಟೆಯಿಂದ ಐದು ರಾಜ್ಯಗಳಲ್ಲಿ ಏಕಕಾಲಕ್ಕೆ ಮತ ಎಣಿಕೆ ಆರಂಭವಾಗಿ ಬಹುತೇಕ ಸಂಜೆ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಫಲಿತಾಂಶಕ್ಕೂ ಮುನ್ನವೇ ಎಲ್ಲ ರಾಜಕೀಯ ಪಕ್ಷಗಳಲ್ಲೂ ಅಧಿಕಾರ ಹೂಡಲು ತಂತ್ರ, ಪ್ರತಿತಂತ್ರ ಹಾಗೂ ರೆಸಾರ್ಟ್ ರಾಜಕೀಯ ಪ್ರಾರಂಭವಾಗಿದೆ.
ಚುನಾವಣೋತ್ತರ ಸಮೀಕ್ಷೆಗಳಲ್ಲಿ ಉತ್ತರಪ್ರದೇಶ, ಮಣಿಪುರ ಮತ್ತು ಉತ್ತರಖಂಡ್‍ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದರೆ, ಪಂಜಾಬ್‍ನಲ್ಲಿ ಮೊದಲ ಬಾರಿಗೆ ಆ್ಯಪ್ ಅಧಿಕಾರ ಗದ್ದುಗೆ ಏರಿಲಿದೆ ಎಂದು ಸಮೀಕ್ಷೆ ಹೇಳಿವೆ. ಇನ್ನು ಕೆಲವು ಸಮೀಕ್ಷೆಗಳು ಉತ್ತರಖಂಡ್ ಮತ್ತು ಗೋವಾದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಭಾರೀ ಹಣಾಹಣಿ ಏರ್ಪಡುವ ಸಂಭವವಿದೆ ಎಂದು ಮತ ದಾನೋತ್ತರ ಸಮೀಕ್ಷೆಗಳು ಹೇಳಿವೆ.
ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು ಈಗಾಗಲೇ ಗೆಲ್ಲಬಹುದಾದ ತಮ್ಮ ತಮ್ಮ ಸಂಭವನೀಯ ಅಭ್ಯರ್ಥಿಗಳನ್ನು ಸುರಕ್ಷಿತ ಸ್ಥಳದಲ್ಲಿ ಹಿಡಿದಿಟ್ಟುಕೊಳ್ಳಲು ಮೊರೆ ಹೋಗಿದ್ದಾರೆ. ಗೋವಾದಲ್ಲಿ ಈಗಾಗಲೇ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೇವೆ ಎಂಬ ಶಾಸಕರನ್ನು ರೆಸಾರ್ಟ್‍ಗೆ ಕರೆದೊಯ್ದಿದೆ. ಬಿಜೆಪಿ ಕೂಡ ಇದೇ ತಂತ್ರವನ್ನು ಅನುಸರಿಸಿದೆ.
ಪುಟ್ಟ ರಾಜ್ಯವಾದ ಗೋವಾದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಬಿಜೆಪಿ ಈಗಾಗಲೇ ಕೆಲವು ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವ ರಣತಂತ್ರ ರೂಪಿಸಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪಣಜಿಯಲ್ಲಿ ಬೀಡು ಬಿಟ್ಟಿದ್ದರೆ , ಕಾಂಗ್ರೆಸ್‍ನಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಅಲ್ಲಿಯೇ ಠಿಕ್ಕಾಣಿಗೆ ಹೂಡಿದ್ದಾರೆ.
ದೇಶದ ರಾಜಕಾರಣಕ್ಕೆ ದಿಕ್ಸೂಚಿ ಎಂದೇ ಹೇಳಲಾಗುವ ಉತ್ತರಪ್ರದೇಶದಲ್ಲಿ ಬಿಜೆಪಿ, ಸಮಾಜವಾದಿ ಪಕ್ಷ ಮತ್ತು ಆರ್‍ಎಲ್‍ಡಿ ನಡುವೆ ತೀವ್ರಾ ಹಣಾಹಣಿ ಏರ್ಪಟ್ಟಿದೆ. ಕೊನೆಯ ಹಾಗೂ 7ನೇ ಹಂತದ ಮತದಾನ ಮುಗಿದ ನಂತರ ವಿವಿಧ ಖಾಸಗಿ ಸಂಸ್ಥೆಗಳು ನಡೆಸಿರುವ ಮತದಾನೋತ್ತರ ಸಮೀಕ್ಷೆಯಲ್ಲಿ ಬಹುತೇಕ ಸಮೀಕ್ಷೆಗಳು ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದೆ.
ಹಾಗೊಂದು ವೇಳೆ ಉತ್ತರಪ್ರದೇಶದಲ್ಲಿ ಪುನಃ ಬಿಜೆಪಿಯೇ ಅಧಿಕಾರಕ್ಕೆ ಬಂದರೆ ಅದು ದಾಖಲೆಯಾಗಲಿದೆ. ಏಕೆಂದರೆ ಇಲ್ಲಿ ಒಂದು ಬಾರಿ ಆಡಳಿತ ನಡೆಸಿದವರು ಪುನಃ 2ನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ನಿದರ್ಶನಗಳಿಲ್ಲ. ಮತದಾರರು ಕಮಲವನ್ನು ಕೈ ಹಿಡಿದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೊಸ ದಾಖಲೆಯನ್ನು ನಿರ್ಮಿಸಲಿದ್ದಾರೆ.
ದೇವರನಾಡು ಎಂದೇ ಕರೆಯುವ ಉತ್ತರಖಂಡ್‍ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರೀ ಹಣಾಹಣಿ ಏರ್ಪಟ್ಟಿದೆ. ಕೆಲವು ಸಮೀಕ್ಷೆಗಳು ಬಿಜೆಪಿ ಸ್ಪಷ್ಟ ಬಹುಮತ ಪಡೆದು 2ನೇ ಬಾರಿಗೆ ಅಕಾರಕ್ಕೆ ಬರಲಿದೆ ಎಂದು ಹೇಳಿವೆ. ಒಂದು ವೇಳೆ ಇಲ್ಲಿಯೂ ಕೂಡ ಬಿಜೆಪಿ ಅಧಿಕಾರಕ್ಕೆ ಬಂದರೆ ಅದು ಕೂಡ ದಾಖಲೆಯಾಗಲಿದೆ. ಏಕೆಂದರೆ ಉತ್ತರಪ್ರದೇಶದಿಂದ ವಿಭಜನೆಯಾಗಿ ಹೊಸ ರಾಜ್ಯವಾಗಿ ಉದಯವಾದ ನಂತರ ನಡೆ ಚುನಾವಣೆಗಳಲ್ಲಿ ಸತತವಾಗಿ ಯಾವುದೇ ಒಂದು ಪಕ್ಷ ಅಧಿಕಾರಕ್ಕೆ ಬಂದಿರುವ ಉದಾಹರನೆಯಿಲ್ಲ.
ಬಿಜೆಪಿ ಒಂದೇ ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲಾಯಿಸಿತು. ಹಾಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ದಾಮಿ ನೇತೃತ್ವದಲ್ಲಿ ಚುನಾವಣೆ ಎದುರಿಸಿದೆ. ಇತ್ತರ ಕಾಂಗ್ರೆಸ್ ತನ್ನ ಹಳೆಯ ಹುಲಿ ಹರೀಶ್ ರಾವತ್ ನೇತೃತ್ವದಲ್ಲಿ ಚುನಾವಣೆ ಅಖಾಡಕ್ಕೆ ಇಳಿದಿತ್ತು.
ಎರಡೂ ಪಕ್ಷಗಳು ನಾವೇ ಅಕಾರಕ್ಕೆ ಬರುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದಾರೆ. ಸಿಖ್‍ರ ನಾಡು ಪಂಜಾಬ್‍ನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವ ಸಂಭವವಿದೆ ಎನ್ನಲಾಗುತ್ತಿದೆ.
ಇಲ್ಲಿ ಆಮ್ ಆದ್ಮಿ ಅಧಿಕಾರ ಹಿಡಿಯುವ ಸಂಭವವಗಳು ಹೆಚ್ಚಾಗಿವೆ. ಒಂದು ವೇಳೆ ಎಎಪಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಮತ್ತೊಂದು ಪರ್ಯಾಯ ಶಕ್ತಿ ಉದ್ಭವವಾಗುವ ಸಾಧ್ಯತೆಯು ಹೆಚ್ಚಾಗಿದೆ. ಬಿಜೆಪಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಎಎಪಿ ಪ್ರಬಲ ಎದುರಾಳಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈಶಾನ್ಯ ರಾಜ್ಯ ಮಣಿಪುರದಲ್ಲಿ ಪುನಃ ಬಿಜೆಪಿಯೇ ಅಧಿಕಾರ ಹಿಡಿಯುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಹೇಳಿವೆ.
ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ಬಿಜೆಪಿ 2ನೇ ಬಾರಿಗೆ ಅಕಾರಕ್ಕೆ ಬರುವ ಸಾಧ್ಯತೆಯಿದ್ದು, ಮುಖ್ಯಮಂತ್ರಿ ಎನ್.ಬೈರನ್ ಸಿಂಗ್ ಪುನಃ ಕಮಲ ಅರಳಿಸಲಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ. ಈ ಐದು ರಾಜ್ಯಗಳ ಚುನಾವಣಾ ಫಲಿತಾಂಶವನ್ನು ಇಡೀ ದೇಶವೇ ಕಾತುರದಿಂದ ಎದುರು ನೋಡುತ್ತಿವೆ. 2024ರ ಲೋಕಸಭೆ ಚುನಾವಣೆಗೆ ಇದು ದಿಕ್ಸೂಚಿ ಎಂದೇ ರಾಜಕೀಯ ವಲಯಗಳಲ್ಲಿ ಹೇಳಲಾಗುತ್ತಿದೆ.
ಅಂತಿಮವಾಗಿ ಮತದಾರರ ಮರ್ಮ ಏನೆಂಬದು ನಾಳಿನ ಫಲಿತಾಂಶದಿಂದ ಹೊರಬೀಳಲಿದೆ.
