ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿ ಸ್ಪರ್ಧೆ, ಮೇಲ್ಮನೆ ಚುನಾವಣೆ ಪಕ್ಕಾ

ಬೆಂಗಳೂರು, ಫೆ .7- ಕಾಂಗ್ರೆಸ್-ಜೆಡಿಎಸ್ ಒಮ್ಮತದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅನಿಲ್‍ಕುಮಾರ್ ನಾಮಪತ್ರ ಕ್ರಮಬದ್ಧವಾಗಿರುವುದರಿಂದ ವಿಧಾನಪರಿಷತ್‍ನ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆ ಕುತೂಹಲ ಘಟ್ಟ ತಲುಪಿದೆ. ಇಂದು ನಾಮಪತ್ರಗಳ ಪರಿಶೀಲನೆ ನಡೆದಿದ್ದು, ದೋಸ್ತಿ ಪಕ್ಷಗಳ ಬೆಂಬಲ ಪಡೆದು ಕಣಕ್ಕಿಳಿದಿರುವ ಅನಿಲ್‍ಕುಮಾರ್ ಅವರ ನಾಮಪತ್ರ ಕ್ರಮಬದ್ಧವಾಗಿದೆ.

ಮತ್ತೋರ್ವ ಪಕ್ಷೇತರ ಅಭ್ಯರ್ಥಿ ಪದ್ಮನಾಭ್ ಎಂಬುವರ ನಾಮಪತ್ರ ತಿರಸ್ಕøತಗೊಂಡಿದೆ. ಅವರ ನಾಮಪತ್ರಕ್ಕೆ ಸೂಚಕರಾಗಿ ಯಾರೊಬ್ಬರೂ ಸಹಿ ಹಾಕದ ಕಾರಣ ತಿರಸ್ಕಾರವಾಗಿದೆ. ಸೋಮವಾರ ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಒಂದು ವೇಳೆ ಅನಿಲ್‍ಕುಮಾರ್ ನಾಮಪತ್ರ ಹಿಂಪಡೆದರೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹಾದಿ ಸುಗಮವಾಗಲಿದೆ.

ಒಂದು ವೇಳೆ ಅನಿಲ್‍ಕುಮಾರ್ ಕಣದಲ್ಲೇ ಉಳಿದರೆ ಚುನಾವಣೆ ನಡೆಯುವುದು ಅನಿವಾರ್ಯವಾಗುತ್ತದೆ. ಈಗಿನ ವಿಧಾನಸಭೆಯ 222 ಸದಸ್ಯ ಬಲಾಬಲದಲ್ಲಿ ಆಡಳಿತಾರೂಢ ಬಿಜೆಪಿ 117 ಶಾಸಕರನ್ನು ಹೊಂದಿದೆ. ಪಕ್ಷೇತರ ಶಾಸಕರಾದ ಸಚಿವ ಎಚ್.ನಾಗೇಶ್ ಹಾಗೂ ಎನ್.ಮಹೇಶ್ ಅವರ ಬೆಂಬಲವನ್ನು ಪಡೆಯಲು ಮುಂದಾಗಿದೆ. ಪ್ರತಿಪಕ್ಷ ಕಾಂಗ್ರೆಸ್ 65, ಜೆಡಿಎಸ್ 35 ಸದಸ್ಯರನ್ನು ಹೊಂದಿವೆ.

ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಆಯ್ಕೆಯಾಗಬೇಕಾದರೆ ಯಾವುದೇ ಸದಸ್ಯ 112 ಮತಗಳನ್ನು ಪಡೆಯಬೇಕು. ಬಿಜೆಪಿ ಅಭ್ಯರ್ಥಿಗೆ ಗೆಲುವಿನ ಹಾದಿ ಸುಗಮವಾಗಿದ್ದರೂ ಸಚಿವ ಸ್ಥಾನದಿಂದ ವಂಚಿತರಾಗಿರುವ ಕೆಲವು ಶಾಸಕರು ಕೈ ಕೊಡುವ ಭೀತಿ ಆವರಿಸಿದೆ. ವಿಧಾನಪರಿಷತ್‍ಗೆ ರಹಸ್ಯ ಮತದಾನ ನಡೆಯುವುದರಿಂದ ಯಾವ ಶಾಸಕರು ಯಾವ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂಬುದು ತಿಳಿಯುವುದಿಲ್ಲ.

ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರಿಗೆ ವಿಪ್ ಜಾರಿಯಾಗಲಿದ್ದು ಪಕ್ಷ ಸೂಚಿಸುವ ಅಭ್ಯರ್ಥಿಗೆ ಮತ ಹಾಕಬೇಕು. ಚುನಾವಣಾ ಏಜೆಂಟರಿಗೆ ಶಾಸಕರು ನಾನು ಈ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದು ತೋರಿಸಿಯೇ ಮತ ಹಾಕಬೇಕು. ಪರಿಷತ್‍ನಲ್ಲಿ ಎಲ್ಲವೂ ಉಲ್ಟಾ ಆಗಿರುವುದರಿಂದ ಬಿಜೆಪಿಗೆ ಒಳಹೊಡೆತದ ಗುಮ್ಮಾ ಕಾಡುತ್ತಿದೆ.