ಬೆಂಗಳೂರು,ಆ.1-ಭಾರತದ ಚುನಾವಣಾ ಆಯೋಗ ಇಂದಿನಿಂದ ಅನುಷ್ಠಾನಗೊಳಿಸುತ್ತಿರುವ ಚುನಾವಣಾ ಸುಧಾರಣೆಗಳನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಉದ್ಘಾಟಿಸಿದರು. ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿ ವತಿಯಿಂದ ವಿಕಾಸಸೌಧದಲ್ಲಿಂದು ಆಯೋಜಿಸಿದ್ದ ಚುನಾವಣಾ ಸುಧಾರಣಾ ಕಾರ್ಯಕ್ರಮ ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ವಿಶ್ವದಲ್ಲೇ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ ಭಾರತ. ದೇಶದಲ್ಲಿ ಕೂಡ ಪ್ರಜಾಪ್ರಭುತ್ವ ಯಶಸ್ವಿಯಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಅದಕ್ಕಾಗಿ ಚುನಾವಣಾ ಆಯೋಗ ಹಲವು ಸುಧಾರಣೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಅಲ್ಲದೆ ಸರಳೀಕರಣ ತಂದು ಪಾರದರ್ಶಕವಾಗಿ ಅನುಷ್ಠಾನಗೊಳಿಸುತ್ತಿದೆ.
ಸತತ ಸುಧಾರಣೆಯಾಗಬೇಕು. ಆಯೋಗ ತಂದಿರುವ ಸುಧಾರಣೆಗಳು ಸಾರ್ವಜನಿಕರಿಗೆ ತಲುಪಬೇಕು. ಆಧಾರ್ ಜೋಡಣೆ ಮಾಡಿದರೆ ಮತದಾನ ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಇರುವುದಿಲ್ಲ. ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಚುನಾವಣಾ ಸುಧಾರಣೆಗಳನ್ನು ಜಾರಿಗೆ ತಂದಿದ್ದು ಅವುಗಳ ಅನುಷ್ಠಾನದಲ್ಲಿ ರಾಜ್ಯಕ್ಕೆ ಒಳ್ಳೆಯ ಹೆಸರು ತರಬೇಕು. ಹೀಗಾಗಿ ಚುನಾವಣಾ ಕಾರ್ಯದಲ್ಲಿ ನಿರತರಾದವರು ಮನೆ ಮನೆಗೆ ತರಳಿ ಅರಿವು ಮೂಡಿಸಬೇಕು.
ವೋಟರ್ ಹೆಲ್ಪ್ಲೈನ್ ಆ್ಯಪ್ನ್ನು ಡೌನ್ಲೋಡ್ ಮಾಡಿಕೊಂಡು ಮತದಾರರ ಗುರುತಿನ ಚೀಟಿ ಪಡೆಯುವಂತಾಗಬೇಕು. ಚುನಾವಣಾ ಮಹತ್ವವನ್ನು ಮನವರಿಕೆ ಮಾಡಿಕೊಟ್ಟು ಅರ್ಹರೆಲ್ಲರೂ ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು ಎಂದರು. ದೇಶದಲ್ಲಿ ಅಜಾದಿ ಕಾ ಮಹೋತ್ಸವ ಆಚರಣೆ ಮಾಡುತ್ತಿದ್ದೇವೆ. 75 ವರ್ಷ ಚೆನ್ನಾಗಿ ಚುನಾವಣೆಗಳು ನಡೆದಿವೆ.
ಚುನಾವಣೆ ಪ್ರಕ್ರಿಯೆಯಲ್ಲಿ ಮತ್ತಷ್ಟು ಪಾರದರ್ಶಕ ತಂದು ಸರಳೀಕರಣಕ್ಕಾಗಿ ಹಲವು ಸುಧಾರಣೆಗಳನ್ನು ತರಲಾಗಿದೆ ಎಂದು ಹೇಳಿದರು. ವರ್ಷದಲ್ಲಿ ಮತದಾರರ ಪಟ್ಟಿಗೆ ನೊಂದಾಯಿಸಲು 4 ಅವಕಾಶಗಳನ್ನು ಕಲ್ಪಿಸಲಾಗಿದೆ. ಜನವರಿ 1ರ ಅರ್ಹತಾ ದಿನಾಂಕದ ಜೊತೆಗೆ ಏಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1ರಂದು ಕೂಡ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ. 17 ವರ್ಷ ತುಂಬಿದವರು ಮುಂಗಡವಾಗಿ ಅರ್ಜಿ ಸಲ್ಲಿಸಲು ಸೌಲಭ್ಯ ಕಲ್ಪಿಸಲಾಗಿದೆ. ಮತದಾರರ ನೊಂದಣಿಗೆ ಸರಳೀಕರಿಸಿದ ಅರ್ಜಿ ನಮೂನೆಗಳು ಇಂದಿನಿಂದ ಲಭ್ಯವಾಗಿವೆ.
ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ ಮತ್ತಿತರ ತಿದ್ದುಪಡಿಗಾಗಿ ಹೊಸ ನಮೂನೆ 8ನ್ನು ಬಳಸಬಹುದು. ಮತದಾರರ ಪಟ್ಟಿಗೆ ಸ್ವಯಂಪ್ರೇರಿತವಾಗಿ ಆಧಾರ್ ಜೋಡಣೆ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ಮತದಾರರ ಪಟ್ಟಿ ಪೂರ್ವ ಪರಿಷ್ಕರಣೆ ಆಗಸ್ಟ್ ತಿಂಗಳಿನಿಂದಲೇ ಪ್ರಾರಂಭ ಮಾಡುವುದು ಸೇರಿದಂತೆ ಹಲವು ಸುಧಾರಣೆಗಳನ್ನು ಜಾರಿಗೆ ತಂದಿದೆ.
ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಬಿಬಿಎಂಪಿ ಆಡಳಿತಾಕಾರಿ ರಾಕೇಶ್ ಸಿಂಗ್, ರಾಜ್ಯ ಮುಖ್ಯ ಚುನಾವಣಾಕಾರಿ ಮನೋಜ್ಕುಮಾರ್ ಮೀನಾ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತಿತರರು ಪಾಲ್ಗೊಂಡಿದ್ದರು.