ಬೆಂಗಳೂರು,ಮಾ.18- ಎತ್ತರದ ವಾಹನಗಳ ಸಂಚಾರ ನಿರ್ಬಂಧಕ್ಕೆ ರಸ್ತೆ ಮೇಲ್ಬಾಗದಲ್ಲಿ ನಿರ್ಮಿಸಲಾಗಿರುವ ತಡೆಗೆ ಎಲೆಕ್ಟ್ರೀಕಲ್ ವಾಹನವೊಂದು ಸಿಲುಕಿ ಸಂಚಾರ ವ್ಯತ್ಯಯವಾದ ಘಟನೆ ಗೋರಗುಂಟೆಪಾಳ್ಯದ ಬಳಿ ನಡೆದಿದೆ.
ಗೋರಗುಂಟೆಪಾಳ್ಯದ ಬಳಿ ಸಿಗ್ನಲ್ ಬಳಿ ರಿಂಗ್ ರಸ್ತೆಗೆ ಲಘುವಾಹನಗಳ ಮುಕ್ತ ಸಂಚಾರಕ್ಕೆ ಅನುಕೂಲವಾಗುವಂತೆ ನಿರ್ದಿಷ್ಟ ಎತ್ತರದಲ್ಲಿ ಕಬ್ಬಿಣದ ತಡೆಯನ್ನು ನಿರ್ಮಿಸಲಾಗಿದೆ. ಇದರ ಅಡಿಯಲ್ಲಿ ಕಾರು, ಆಟೋ, ಬೈಕ್‍ಗಳು ಸಂಚರಿಸಬಹುದು.
ಅದನ್ನು ಮೀರಿದ ಎತ್ತರದ ವಾಹನಗಳು ಸಂಚರಿಸಿದರೆ ಸಿಲುಕಿಕೊಳ್ಳುತ್ತವೆ. ಇಂದು ಮಧ್ಯಾಹ್ನ ಎತ್ತರದ ಎಲೆಕ್ಟ್ರಿಕಲ್ ಸರಕು ಸಾಗಾಣಿಕೆ ವಾಹನವೊಂದು ಫ್ರಿ ಲೆಫ್ಟ್‍ನಲ್ಲಿ ಸಂಚರಿಸಲು ಈ ತಡೆಗೋಡೆಯ ಕೆಳಗೆ ನುಸುಳಿದೆ.
ಎತ್ತರ ಸಾಲದೆ ಕಬ್ಬಿಣದ ಸರಳಿಗೆ ಸಿಲುಕಿಕೊಂಡಿದೆ. ಅದನ್ನು ತೆರವುಗೊಳಿಸಲು ಕೆಲ ಕಾಲ ಪ್ರಯಾಸ ಪಡಬೇಕಾಯಿತು. ಇದರಿಂದ ಗೋರಗುಂಟೆ ಪಾಳ್ಯ ವೃತ್ತದ ಬಳಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.