ಬಲಿಗಾಗಿ ಕಾಯುತ್ತಿವೆ ಪಾರ್ಕ್‍ನ ಮೇಲೆ ಹಾದುಹೋಗಿರುವ ವಿದ್ಯುತ್ ತಂತಿಗಳು..!

ಬೆಂಗಳೂರು, ಏ.29- ಮಹಾಲಕ್ಷ್ಮಿ ಲೇಔಟ್‍ನ ವಾಸವಿ ದೇವಾಲಯದ ಬಳಿ ಇರುವ ಪಾರ್ಕ್‍ನ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳು ಅಪಾಯದ ಮುನ್ಸೂಚನೆ ನೀಡುತ್ತಿದ್ದರು ಬೆಸ್ಕಾಂ ಮಾತ್ರ ಎಚ್ಚೆತ್ತುಕೊಂಡಿಲ್ಲ.

ಪಾರ್ಕಿನಲ್ಲಿರುವ ಮರದ ಕೊಂಬೆಗಳು ವಿದ್ಯುತ್ ತಂತಿಗಳಿಗೆ ತಾಗುವ ರೀತಿ ಬೆಳೆದಿವೆ. ಈ ಪಾರ್ಕಿನಲ್ಲಿ ಮಕ್ಕಳು ಪ್ರತಿನಿತ್ಯವೂ ಆಟವಾಡುತ್ತಾರೆ. ಮರದ ಕೊಂಬೆಗಳಿಗೆ ವಿದ್ಯುತ್ ತಂತಿಗಳು ತಾಗುತ್ತಿರುವುದನ್ನು ನೋಡಿದರೆ ಅಪಾಯಕ್ಕೆ ಎಡೆ ಮಾಡಿಕೊಟ್ಟಂತಿದೆ. ಬೆಸ್ಕಾಂ ಸಿಬ್ಬಂದಿ ವಿದ್ಯುತ್ ತಂತಿ ತಾಗುತ್ತಿರುವ ಮರದ ಕೊಂಬೆಗಳನ್ನು ತೆರವುಗೊಳಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

ಇಲ್ಲಿ ಮಕ್ಕಳು ಭಯದಿಂದಲೇ ಆಟವಾಡುವಂತಾಗಿದೆ. ಮರದ ಕೊಂಬೆಗಳಿಗೆ ವಿದ್ಯುತ್ ತಂತಿ ತಾಗುತ್ತಿರುವುದನ್ನು ಗಮನಿಸಿ ಬಹಳಷ್ಟು ಫೋಷಕರು ತಮ್ಮ ಮಕ್ಕಳನ್ನು ಪಾರ್ಕಿನತ್ತ ಕರೆ ತರಲು ಹಿಂದೇಟು ಹಾಕುತ್ತಿದ್ದಾರೆ. ದುರ್ಘಟನೆ ಸಂಭವಿಸುವ ಮುನ್ನ ಬೆಸ್ಕಾಂ ಸಿಬ್ಬಂದಿ ಮರದ ಗೊಂಬೆಗಳನ್ನು ತೆರವುಗೊಳಿಸಿ ಮಕ್ಕಳು ನಿರ್ಭೀತಿಯಿಂದ ಆಟವಾಡಲು ಅನುಕೂಲ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಆಗ್ರಹ.

ಇತ್ತೀಚೆಗಷ್ಟೆ ಮಹಾಲಕ್ಷ್ಮಿ ಲೇಔಟ್‍ನ ನಾಗಲಿಂಗೇಶ್ವರ ದೇವಾಲಯದ ಬಳಿ ಆಟವಾಡುತ್ತಿದ್ದ ಬಾಲಕನಿಗೆ ವಿದ್ಯುತ್ ತಂತಿ ತಗುಲಿ ದ ಪರಿಣಾಮ ತೀವ್ರವಾಗಿ ಗಾಯಗೊಂಡಿರುವ ಈತನ ಸ್ಥಿತಿ ಚಿಂತಾಜನಕವಾಗಿತ್ತು.

ಇದೀಗ ಬಾಲಕ ಚೇತರಿಸಿಕೊಳ್ಳುತ್ತಿದ್ದು ಇಂತಹ ದುರ್ಘಟನೆಗಳು ಮರುಕಳಿಸುವ ಮುನ್ನವೆ ಸಂಬಂಧಿತ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು ಮಕ್ಕಳು ಆಟವಾಡುವ ಸ್ಥಳಗಳಲ್ಲಿ ವಿದ್ಯುತ್ ತಂತಿಗಳನ್ನು ಅಳವಡಿಸುವ ವೇಳೆ ಸಾಕಷ್ಟು ಎಚ್ಚರಿಕೆ ವಹಿಸುವ ಅಗತ್ಯವಿದೆ.