ಬೆಂಗಳೂರು,ಜು.30- ನಡೆದು ಹೋಗುತ್ತಿದ ಎಲೆಕ್ಟ್ರಿಷಿಯನ್ ಜೊತೆ ಜಗಳವಾಡಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಸೈಯದ್ ಇರ್ಫಾನ್(28) ಕೊಲೆಯಾದ ಎಲೆಕ್ಟ್ರೀಷಿಯನ್, ಆರೋಪಿ ಖಾಸಿಂನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೈಯದ್ ಇರ್ಫಾನ್ ಮತ್ತು ಖಾಸಿಂ ಪರಿಚಯಸ್ಥರು. ಕಳೆದೊಂದು ವರ್ಷದಿಂದ ಇವರ ಮಧ್ಯೆ ಮನಸ್ತಾಪ ಉಂಟಾಗಿ ಮಾತುಬಿಟ್ಟಿದ್ದರು.
ರಾತ್ರಿ 11 ಗಂಟೆ ಸುಮಾರಿನಲ್ಲಿ ಆನೆಪಾಳ್ಯದ ಗಲ್ಲಿಯಲ್ಲಿ ಸೈಯದ್ ಇರ್ಫಾನ್ ನಡೆದು ಹೋಗುತ್ತಿದ್ದಾಗ ಖಾಸಿಂ ಎದುರಾಗಿ ಆತನನ್ನು ಅಡ್ಡಗಟ್ಟಿ ನೀನು ಇಲ್ಲಿಗೆ ಏಕೆ ಬಂದಿದ್ದೀಯಾ ಎಂದು ಜಗಳವಾಡಿ ಚಾಕುವಿನಿಂದ ಸೈಯದ ಇರ್ಫಾನ್ ತೊಡೆಗೆ ಇರಿದಿದ್ದಾನೆ.
ತೀವ್ರ ರಕ್ತಸ್ರಾವದಿಂದ ಗಂಭೀರ ಗಾಯಗೊಂಡ ಸೈಯದ್ ಇರ್ಫಾನ್ನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಇಂದು ಬೆಳಗಿನ ಜಾವ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.
ಸುದ್ದಿ ತಿಳಿದು ಅಶೋಕನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಖಾಸಿಂನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.