ದಸರಾ ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದಾಗಿ ಮಾವುತ, ಕಾವಾಡಿಗರ

Social Share

ಮೈಸೂರು/ಕುಶಾಲನಗರ,ಆ.1- ಸಾಕಾನೆ ಶಿಬಿರಗಳ ಆನೆ ಮಾವುತರು, ಕಾವಾಡಿಗರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಬಾರಿ ದಸರಾ ಬಹಿಷ್ಕರಿಸಿ ಪ್ರತಿಭಟನೆ ನಡೆಸಲು ಆನೆ ಮಾವುತ, ಕಾವಾಡಿಗರ ಸಂಘ ನಿರ್ಧರಿಸಿದೆ.

ವೇತನ ತಾರತಮ್ಯ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವು ವರ್ಷಗಳಿಂದ ಮನವಿ ಮಾಡಿದ್ದರೂ ಇದುವರೆಗೂ ಈಡೇರದ ಕಾರಣ ಈ ಬಾರಿ ದಸರಾಗೆ ಸಾಕಾನೆಗಳನ್ನು ಕಳುಹಿಸದೆ ಪ್ರತಿಭಟನೆ ನಡೆಸಲು ದುಬಾರೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕುಶಾಲನಗರ ವಲಯ ದುಬಾರೆ ಸಂಘದ ಅಧ್ಯಕ್ಷ ಅಣ್ಣಯ್ಯ ದೊರೆಯಪ್ಪ ತಿಳಿಸಿದ್ದಾರೆ.

ಆ.7ರಂದು ವೀರನಹೊಸಳ್ಳಿಯಿಂದ ಗಜಪಯಣ ಅರಂಭವಾಗಲಿದೆ. ಅಯಾ ಶಿಬಿರಗಳಲ್ಲಿ ಆನೆಗಳ ನಿರ್ವಹಣೆ ಹೊರತುಪಡಿಸಿ ಹುಲಿ ಹಿಡಿಯುವುದು, ಕಾಡಾನೆ ಹಿಡಿಯುವುದು ಸೇರಿದಂತೆ ದಸರಾಗೆ ಆನೆಗಳನ್ನು ಕಳುಹಿಸುವ ಕಾರ್ಯ ಬಹಿಷ್ಕರಿಸಿ ಪ್ರತಿಭಟಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಂಘದ ಪ್ರಮುಖ ಮೇಘರಾಜ್ ಮಾಹಿತಿ ನೀಡಿದ್ದಾರೆ.

ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿಗಳು ಲಿಖಿತ ರೂಪದಲ್ಲಿ ಭರವಸೆ ನೀಡಿದಲ್ಲಿ ಮಾತ್ರ ಹೆಚ್ಚುವರಿ ಕೆಲಸ ನಿರ್ವಹಿಸಲಾಗುವುದು ಎಂದಿದ್ದಾರೆ.

ದುಬಾರೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸಂಘದ ರಾಜ್ಯ ಅಧ್ಯಕ್ಷ ಗೌಸ್ ಖಾನ್, ಉಪಾಧ್ಯಕ್ಷ ಜೆ.ಕೆ.ಡೋಬಿ, ಪ್ರಧಾನ ಕಾರ್ಯದರ್ಶಿ ಫರ್ವಿನ್ ಪಾಷಾ, ಪ್ರಮುಖರಾದ ಮತ್ತಿಗೋಡಿನ ಜೆ.ಕೆ.ವಸಂತ, ರಾಂಪುರದ ನಾಗೇಶ್, ಜೈವಾಲ್ ಸೇರಿದಂತೆ ದುಬಾರೆ, ಮತ್ತಿಗೋಡು, ಸಕ್ರೆಬೈಲು, ಕೆ.ಗುಡಿ, ರಾಂಪುರ ಶಿಬಿರಗಳ ಮಾವುತ, ಕಾವಾಡಿಗರು ಪಾಲ್ಗೊಂಡಿದ್ದರು.

Articles You Might Like

Share This Article