ಕಬ್ಬಿನ ಗದ್ದೆಯಲ್ಲಿಕಾಡಾನೆಗಳು ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ

ಕೆಆರ್ ಪೇಟೆ, ನ.16- ತಾಲೂಕಿನ ಬೂಕನಕೆರೆ ಹೋಬಳಿಯ ಮತ್ತೀಕೆರೆ ಗ್ರಾಮದ ಸಮೀಪ ಕಬ್ಬಿನ ಗದ್ದೆಯಲ್ಲಿ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಉಂಟಾಗಿದೆ. ಸಂಜೆ ವೇಳೆ ಎರಡು ಕಾಡಾನೆಗಳು ಸಾರ್ವಜನಿಕರಿಗೆ ಕಾಣಿಸಿಕೊಂಡು ಅಲ್ಲಿರುವ ಕಬ್ಬಿನ ಗದ್ದೆಯನ್ನು ಸೇರಿಕೊಂಡಿವೆ. ಇದರಿಂದ ಆತಂಕಕ್ಕೆ ಒಳಗಾಗಿರುವ ಸಾರ್ವಜನಿಕರು ತಕ್ಷಣ ಅರಣ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ತಕ್ಷಣ ಗ್ರಾಮಾಂತರ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.  ಆನೆಗಳು ಬಂದಿರುವ ಸುದ್ದಿ ತಿಳಿದ ಜನರು ನೂರಾರು ಸಂಖ್ಯೆಯಲ್ಲಿ ಕಬ್ಬಿನ ಗದ್ದೆಯ ಸುತ್ತ ಕುತೂಹಲದಿಂದ ಜಮಾವಣೆಗೊಂಡಿದ್ದಾರೆ. ಆದರೆ, ಆನೆಗಳು ಮಾತ್ರ ಕಬ್ಬಿನ ಗದ್ದೆಯಿಂದ ಹೊರಬಂದಿಲ್ಲ. ಅರಣ್ಯಾಧಿಕಾರಿಗಳು ಕಬ್ಬಿನ ಗದ್ದೆಯ ಬಳಿ ಬೀಡು ಬಿಟ್ಟಿದ್ದು ಸುರಕ್ಷಿತವಾಗಿ ಕಾಡಿಗೆ ಓಡಿಸಲು ಕ್ರಮ ಕೈಗೊಂಡಿದ್ದಾರೆ.