ಎಲೋನ್ ಮಸ್ಕ್ ಪಾಲಾದ ಟ್ವಿಟರ್ , ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಕ್ತ ಅವಕಾಶ ನಿರೀಕ್ಷೆ

ನವದೆಹಲಿ, ಏ.26- ಟೆಸ್ಲಾ ಕಾರು ಉತ್ಪಾದಕ ಕಂಪೆನಿಯ ಸಿಇಒ ಎಲೋನ್ ಮಸ್ಕ್ ಸಾಮಾಜಿಕ ಜಾಲತಾಣದ ದೈತ್ಯ ಸಂಸ್ಥೆ ಟ್ವಿಟರ್ ಅನ್ನು ಖರೀದಿಸಿದ ಬೆನ್ನಲ್ಲೇ ವಾಕ್ ಸ್ವಾತಂತ್ರ್ಯಕ್ಕೆ ಮುಕ್ತ ಅವಕಾಶಗಳು ಸಿಗುವ ಸಾಧ್ಯತೆಗಳ ಕುರಿತು ಚರ್ಚೆಯಾಗುತ್ತಿದೆ. ಟ್ವಿಟರ್ ಸಂಪೂರ್ಣವಾಗಿ ಮಸ್ಕ್ ಒಡೆತನಕ್ಕೆ ಜಾರಿರುವುದು ಜಾಗತಿಕವಾಗಿ ಮಹತ್ವದ ವಿದ್ಯಮಾನ ಎಂದು ಬಣ್ಣಿಸಲಾಗಿದೆ.

ಈ ತಿಂಗಳ ಆರಂಭದಲ್ಲಿ ಟ್ವಿಟರ್‍ನ ಶೇ.9.2ರಷ್ಟು ಷೇರನ್ನು ಮಸ್ಕ್ ಖರೀದಿಸಿದ್ದರು. ಈ ಮೂಲಕ ಟ್ವೀಟರ್‍ನಲ್ಲಿ ಹೆಚ್ಚು ಷೇರು ಹೊಂದಿದ ಎರಡನೇ ವ್ಯಕ್ತಿಯಾಗಿದ್ದರು. ವ್ಯಾನ್ಗಾರ್ಡ್ ಶೇ.10.3ರಷ್ಟು ಷೇರು ಖರೀದಿಸಿ ಮೊದಲ ಸ್ಥಾನದಲ್ಲಿದ್ದರು. ಆ ವೇಳೆ ಮಸ್ಕ್‍ರನ್ನು ಆಡಳಿತ ಮಂಡಳಿ ಸದಸ್ಯರಾಗಲು ಟ್ವಿಟರ್ ಸಿಇಒ ಪರಾಗ್ ಅಗರ್‍ವಾಲ್ ಆಹ್ವಾನ ನೀಡಿದ್ದರು. ಆದರೆ ಅದನ್ನು ತಿರಸ್ಕರಿಸಿದ ಮಸ್ಕ್ ಟ್ವಿಟರ್‍ನ ಸಂಪೂರ್ಣ ಮಾಲೀಕತ್ವ ಹೊಂದಲು ತಮ್ಮ ಪ್ರಯತ್ನ ನಡೆಸಿದ್ದರು.

ಅಂತಿಮವಾಗಿ 44 ಬಿಲಿಯನ್ (440 ಶತಕೋಟಿ) ಡಾಲರ್ ಮೌಲ್ಯದ ಷೇರುಗಳನ್ನು ಖರೀದಿಸಿ ಟ್ವಿಟರ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಟ್ವಿಟರ್‍ನ ಪ್ರತಿ ಷೇರಿನ ಮೌಲ್ಯ 54.20 ಡಾಲರ್ ಇದೆ. ಈ ಮೂಲಕ ಸಾಮಾಜಿಕ ಜಾಲತಾಣದ ಮುಂಚೂಣಿ ಸಂಸ್ಥೆ 50 ವರ್ಷದ ಅಮೆರಿಕಾ ಪ್ರಜೆ ಎಲೋನ್ ಮಸ್ಕ್ ಪಾಲಾಗಿದೆ. ಆರಂಭದಲ್ಲಿ ಟ್ವಟರ್‍ನ ಸಿಇಒ ಮತ್ತು ಆಡಳಿತ ಮಂಡಳಿ ಮಾಲೀಕತ್ವ ಬದಲಾವಣೆ ಪ್ರಕ್ರಿಯೆಯನ್ನು ವಿರೋಸಿತ್ತು. ಅದಕ್ಕೆ ವಿರುದ್ಧವಾಗಿ ಟ್ವಿಟರ್ ಸಹ-ಸಂಸ್ಥಾಪಕ ಜ್ಯಾಕ್ ಡಾರ್ಸೆ ಅವರು ಮಸ್ಕ್‍ರನ್ನು ಬೆಂಬಲಿಸಿದ್ದರು.

ಟ್ವಿಟರ್ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಕ್ತ ಅವಕಾಶ ನೀಡುತ್ತಿಲ್ಲ ಎಂಬ ಆಕ್ಷೇಪವನ್ನು ಮಸ್ಕ್ ಪದೇ ಪದೇ ವ್ಯಕ್ತ ಪಡಿಸುತ್ತಿದ್ದರು. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಟ್ವಿಟರ್ ಸ್ಥಳೀಯ ಕಾನೂನು ಪಾಲನೆ ನೆಪದಲ್ಲಿ ಆಡಳಿತಾರೂಢ ಪ್ರಮುಖರ ಒತ್ತಡಕ್ಕೆ ಮಣಿದು ಪ್ರತಿಸ್ರ್ಪಧಿಗಳ ಖಾತೆಗಳನ್ನು ತಡೆ ಹಿಡಿದಿತ್ತು. ಕೆಲವೊಮ್ಮೆ ತಾಂತ್ರಿಕ ಕಾರಣಗಳನ್ನು ಉಲ್ಲೇಖಿಸಿ ಖಾತೆಗಳನ್ನು ಅಗೋಚವಾಗಿಸಲಾಗುತ್ತಿತ್ತು. ಆಕ್ಷೇಪಾರ್ಹ ಅಂಶಗಳ ಹೆಸರಲ್ಲಿ ಖಾತೆ ಅಮಾನತು ಸಾಮಾನ್ಯವಾಗಿತ್ತು.

ಅಮೆರಿಕಾ ಕಾಂಗ್ರೆಸ್ ಚುನಾವಣೆ ವೇಳೆ ನಿರ್ಗಮಿತ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪ್ರಚೋದನಕಾರಿ ಪೋಸ್ಟ್‍ಗಳನ್ನು ಹಾಕುತ್ತಿದ್ದಾರೆ ಎಂಬ ಕಾರಣಕ್ಕೆ ಅವರ ಖಾತೆಯನ್ನು 2020ರ ನವೆಂಬರ್‍ನಲ್ಲಿ ಜಪ್ತಿ ಮಾಡಲಾಗಿದೆ. ಅದು ಈವರೆಗೂ ಮರು ಚಾಲನೆಗೊಂಡಿಲ್ಲ. 88 ದಶಲಕ್ಷ ಹಿಂಬಾಲಕರನ್ನು ಹೊಂದಿರುವ ಟ್ರಂಪ್ ತಮ್ಮ ಖಾತೆ ಜಪ್ತಿಯಾದ ಮೇಲೆ ಸ್ವಂತವಾಗಿ ಸಾಮಾಜಿಕ ಜಾಲತಾಣವನ್ನು ಸ್ಥಾಪಿಸುವ ಪ್ರಯತ್ನಕ್ಕೆ ಕೈ ಹಾಕಿ ವಿಫಲರಾಗಿದ್ದರು.

ಎಲೋನ್ ಟ್ವಿಟರ್ ಖರೀದಿಸುತ್ತಿದ್ದಂತೆ ಅಮೆರಿಕಾ ರಿಪಬ್ಲಿಕ್ ಪಕ್ಷದ ಸಂಸದರು ಟ್ರಂಪ್ ಪರವಾಗಿ ಧ್ವನಿ ಎತ್ತಿದ್ದು, ಜಪ್ತಿಯಾಗಿರುವ ಖಾತೆಯನ್ನು ಮರುಚಾಲನೆ ಮಾಡಿ ಎಂದು ಒತ್ತಾಯಿಸಲಾರಂಭಿಸಿದ್ದಾರೆ. ಭಾರತದಲ್ಲಿ ದೆಹಲಿಯಲ್ಲಿ ಅತ್ಯಾಚಾರ ಸಂತ್ರಸ್ಥೆಯ ಗುರುತನ್ನು ಬಹಿರಂಗ ಪಡಿಸಿದರು ಎಂಬ ಆರೋಪದ ಮೇಲೆ ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್‍ಗಾಂಧಿ ಅವರ ಖಾತೆಯನ್ನು ಅಮಾನತಿನಲ್ಲಿ ಇಡಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಇದರ ವಿರುದ್ಧ ದೊಡ್ಡ ಅಭಿಯಾನ ನಡೆಸಿದ ಬಳಿಕ ಖಾತೆ ಮರುಚಾಲನೆಗೊಂಡಿತ್ತು.

ಆಗ್ಗಾಗ್ಗೆ ಪ್ರಧಾನಿ ಅವರ ಖಾತೆಯೂ ಹ್ಯಾಕ್ ಆಗಿರುವ ಪ್ರಸಂಗಗಳಿವೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಸಂಘ ಪರಿವಾರದ ಖಾತೆಯ ಅಧಿಕೃತ ಮಾನ್ಯತೆಯನ್ನು ಟ್ವಿಟರ್ ದೀರ್ಘ ಕಾಲದ ನಿಷ್ಕ್ರೀಯತೆ ಕಾರಣಕ್ಕೆ ವಿಚಲಿತಗೊಳಿಸಿತ್ತು.

ಟ್ವಿಟರ್ ವಾಕ್ ಸ್ವಾತಂತ್ರ್ಯದ ಮೂಲ ತತ್ವಕ್ಕೆ ಬದ್ಧವಾಗಿಲ್ಲ ಎಂದು ಮಸ್ಕ್ ನಂಬಿದ್ದರು. ಟ್ವಿಟರ್ ಸಾಕಷ್ಟು ಸಾಮಥ್ರ್ಯಗಳನ್ನು ಹೊಂದಿದೆ. ಇದು ಹಣ ಸಂಪಾದಿಸುವ ಒಂದು ಮಾರ್ಗವಲ್ಲ. ಗರಿಷ್ಠ ವಿಶ್ವಾಸಾರ್ಹ ಮತ್ತು ಎಲ್ಲರನ್ನು ಒಳಗೊಳ್ಳುವ ಸಾರ್ವಜನಿಕ ವೇದಿಕೆಯಾಗಬೇಕು. ಅದಕ್ಕಾಗಿ ಜಪ್ತಿ ಮಾಡಲಾದ ಖಾತೆಗಳನ್ನು ಮರುಚಾಲನೆಗೊಳಿಸುವುದು ಬಹಳ ಮುಖ್ಯ ಎಂದು ವ್ಯಾಂಕೋವರ್ನಲ್ಲಿ ನಡೆದ ಸಮ್ಮೇಳನದಲ್ಲಿ ಮಸ್ಕ್ ಟ್ವಿಟರ್ ಖರೀದಿಗೂ ಮೊದಲೇ ಹೇಳಿದರು.

ಟ್ವಿಟರ್ ಎಡಿಟ್ ಟೋಲ್ ಅನ್ನು ಅಳವಡಿಸುವುದಾಗಿ ಇತ್ತೀಚೆಗೆ ಘೋಷಿಸಿತ್ತು. ಬ್ಲೂಟಿಕ್ ಖಾತೆದಾರರಿಗೆ ಮೊದಲು ಎಡಿಟ್ ಟೋಲ್ ಜಾರಿಯಾಗುವ ನಿರೀಕ್ಷೆಗಳಿದ್ದವು. ಈಗ ಮಾಲೀಕತ್ವ ಬದಲಾಗಿರುವುದರಿಂದ ಸೆನ್ಸಾರ್ ಅವಕಾಶಗಳ ಜಾರಿ ವಿಳಂಬವಾಗುವ ನಿರೀಕ್ಷೆಗಳಿವೆ.

ಮಾಲೀಕತ್ವ ಬದಲಾವಣೆ ಟ್ವಿಟರ್ ಉದ್ಯೋಗಿಗಳನ್ನು ಚಿಂತೆಗೀಡು ಮಾಡಿದೆ. ಇತ್ತೀಚೆಗೆ ನಡೆದ ನೌಕರರ ಸಮಾವೇಶದಲ್ಲಿ ಸಿಇಒ ಅಗರ್‍ವಾಲ್ ಅವರು, ಕಂಪನಿ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ತಿಳಿದಿಲ್ಲ. ಒಪ್ಪಂದ ಅಂತಿಮಗೊಂಡ ಬಳಿಕ ಮುಂದಿನ ಮಾರ್ಗಗಳ ಕುರಿತು ಮಾಹಿತಿ ದೊರೆಯಲಿದೆ. ಸದ್ಯಕ್ಕೆ ಯಾರನ್ನು ವಜಾಗೊಳಿಸುವ ಆಲೋಚನೆ ನಡೆದಿಲ್ಲ ಎಂದಿದ್ದರು.