ಸರ್ಕಾರ – ನೌಕರರ ಹಗ್ಗಜಗ್ಗಾಟ, ಸಾರಿಗೆ ಮುಷ್ಕರ ನಿಲ್ಲುವ ಲಕ್ಷಣಗಳೇ ಇಲ್ಲ..!

Spread the love

ಬೆಂಗಳೂರು,ಡಿ.12- ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆಯಂತೆ ಸಾರಿಗೆ ನೌಕರರು ಹಾಗೂ ಸರ್ಕಾರದ ಪ್ರತಿಷ್ಠೆಯಿಂದಾಗಿ ಸಾರ್ವಜನಿಕರು ಇಂದು ಕೂಡ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.  ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಯಾವ ಭಾಗದಲ್ಲೂ ಬಸ್‍ಗಳು ಸಂಚಾರ ಆರಂಭಿಸದ ಹಿನ್ನೆಲೆಯಲ್ಲಿ ಸಾರ್ವಜನಿಕರು ಖಾಸಗಿ ಬಸ್‍ಗಳ ಮೊರೆ ಹೋಗುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.

ಇದರ ನಡುವೆ ಪ್ರತಿಭಟನೆ ಕೈ ಬಿಡದಿದ್ದರೆ ನೌಕರರ ಮೇಲೆ ಎಸ್ಮಾ ಜಾರಿ ಮಾಡುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.  ಯಾವುದೇ ಶಿಸ್ತು ಕ್ರಮ ಜರುಗಿಸಿದರೂ ನಾವು ಮಾತ್ರ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.  ಹೀಗಾಗಿ ಸಾರಿಗೆ ನೌಕರರು ಮತ್ತು ಸರ್ಕಾರದ ನಡುವೆ ಸಂಧಾನ ವಿಫಲವಾಗಿದ್ದು, ಪ್ರತಿಭಟನೆ ಮುಂದುವರೆದಿರುವುದರಿಂದ ಬಸ್‍ಗಳಿಲ್ಲದೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‍ಗಳ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡುತಿದ್ದ ಸಂದರ್ಭದಲ್ಲಿ ಪ್ರಶ್ನೆ ಮಾಡಿದ ಹಿನ್ನೆಲೆ ಮಾತಿನ ಚಕಮಕಿ ನಡೆದು ಕೆಲವು ಬಿಎಂಟಿಸಿ ನೌಕರರು ಹಾಗೂ ಪ್ರಯಾಣಿಕರು ಕೈಕೈ ಮಿಲಾಯಿಸಿಕೊಂಡ ಘಟನೆ ನಡೆದಿದೆ. ನೆಲಮಂಗಲಕ್ಕೆ ಯಶವಂತಪುರದಿಂದ ಬರುತ್ತಿದ್ದ ಬಿಎಂಟಿಸಿ ಬಸ್ಗೆ ಯಶವಂತಪುರ ಸಮೀಪ ಕಿಡಿಗೇಡಿಗಳು ಕಲ್ಲುತೂರಿ ಗಾಜು ಸಂಪೂರ್ಣ ಪುಡಿಪುಡಿಯಾಗಿವೆ.

ಯಶವಂತಪುರ, ಅರಿಶಿನಕುಂಟೆ ಹಾಗೂ ಅಡಕಮಾರನಹಳ್ಳಿ ಡಿಪೆÇೀ ಸೇರಿದಂತೆ ವಿವಿಧ ಭಾಗದಿಂದ ಸರಕಾರಿ ಬಸ್‍ಗಳು ಬಂದರೂ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ನಿಲ್ಲಿಸಿ ಪ್ರತಿಭಟನೆ ಮಾಡಿದ ಪರಿಣಾಮ ಬಿಎಂಟಿಸಿ ಹಾಗೂ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಬೆಳಗ್ಗೆ 9 ಗಂಟೆಯಿಂದ ಸಂಪೂರ್ಣ ಸ್ಥಗಿತವಾಗಿತ್ತು.  ಸರಕಾರಿ ಬಸ್‍ಗಳನ್ನು ಆಶ್ರಯವಾಗಿಸಿಕೊಂಡಿದ್ದ ಬೆಂಗಳೂರಿಗರಿಗೆ ಹಾಗೂ ತಾಲೂಕಿನ ಹಳ್ಳಿಗಳಿಗೆ ಹೋಗುವ ಪ್ರಯಾಣಿಕರು ಬಸ್ ಇಲ್ಲದೆ ಪರದಾಡಿದ್ದಾರೆ. ಖಾಸಗಿ ಬಸ್‍ಗಳು ಸಹ ಕಡಿಮೆ ಸಂಖ್ಯೆಯಲ್ಲಿ ಸಂಚಾರ ಮಾಡುತ್ತಿರುವುದರಿಂದ ಆಟೋ ಹಾಗೂ ಇತರ ವಾಹನಗಳಿಗೆ ಅಲೆದಾಡುವ ಸ್ಥಿತಿ ಎದುರಾಗಿತ್ತು.

#ಪರಿಸ್ಥಿತಿ ನಿಯಂತ್ರಿಸಲು ಸಿಎಂ ಸೂಚನೆ:
ಮತ್ತೊಂದೆಡೆ ಮುಖ್ಯಮಂತ್ರಿ ಯಡಿಯೂರಪ್ಪ ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ.  ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಮಾತ್ರ ನನಗೂ ಸಮಸ್ಯೆಗೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದೆ.

ರಾಜ್ಯದಲ್ಲಿ ಸಾರಿಗೆ ಸಿಬ್ಬಂದಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರಿಸಲು ನೌಕರರು ಹಠಹಿಡಿದಿದ್ದು ಇದರಿಂದಾಗಿ ರಾಜÁ್ಯದ್ಯಂತ ಜನಜೀವನ ಬಾಧಿತವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಹಾವೇರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ರಾಯಚೂರು, ಶಿವಮೊಗ್ಗ, ತುಮಕೂರು, ಬಾಗಲಕೋಟೆ, ಕಲಬುರಗಿ, ಮೈಸೂರು, ಹುಬ್ಬಳ್ಳಿ, ಬಳ್ಳಾರಿ ಬಸ್ ನಿಲ್ದಾಣಗಳು ಸೇರಿದಂತೆ ಮಂಡ್ಯ, ಕೋಲಾರದ ಕೇಂದ್ರ ಬಸ್ ನಿಲ್ದಾಣಗಳು ಖಾಲಿ ಹೊಡೆಯುತ್ತಿವೆ.

ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಬಸ್ ಇಲ್ಲದ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಗಿದೆ. ಕೆಲವು ಜಿಲ್ಲೆಗಳಲ್ಲಿ ಸಾರ್ವಜನಿಕರು ಖಾಸಗಿ ಬಸ್ಗಳ ಮೊರೆ ಹೋಗಬೇಕಾಗಿದೆ. ಮತ್ತೆ, ಕೆಲವೆಡೆ ಜನರು ಅಂತಾರಾಜ್ಯ ಬಸ್‍ಗಳ ಮೊರೆ ಹೋಗುತ್ತಿದ್ದಾರೆ. ಈ ನಡುವೆ, ಪೆÇಲೀಸ್ ಭದ್ರತೆಯಲ್ಲಿ ಬಿಎಂಟಿಸಿ ಬಸ್ ಸಂಚಾರಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಕೆಂಪೇಗೌಡ ಬಸ್ ನಿಲ್ದಾಣದಲ್ಲಿರುವ ಪೆÇಲೀಸ್ ಇಲಾಖೆಯ ಸಿಬ್ಬಂದಿಗೆ ಅಲರ್ಟ್ ಮೆಸೇಜ್ ಕಳುಹಿಸಲಾಗಿದ್ದು ಬಸ್ ಸೇವೆಗೆ ಭದ್ರತೆ ಒದಗಿಸಲು ಸೂಚನೆ ನೀಡಲಾಗಿದೆ.

ಜೊತೆಗೆ ಕೆಲವು ಡಿಪೆÇೀಗಳಿಂದ ಬಸ್ ಸಂಚಾರ ಪ್ರಾರಂಭಿಸುವ ಸಾಧ್ಯತೆವಿರುವ ಹಿನ್ನೆಲೆಯಲ್ಲಿ ಪೆÇಲೀಸ್ ಸಿಬ್ಬಂದಿಗೆ ಬಸ್ ನಿಲ್ದಾಣಗಳಲ್ಲಿ ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ.  ಬೆಳಗಾವಿಯಲ್ಲೂ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರಿಗೆ ನೌಕರರ ಪ್ರತಿಭಟನೆ ಮುಂದುವರಿದಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆಗೆ ಹಾಜರಾದ ನೌಕರರು, ತಲೆ ಮೇಲೆ ಚಪ್ಪಲಿ ಇಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರ ಪರದಾಟ ಕಂಡ ಇಲಾಖೆಯವರು ಇಂದು ಬೆಳಗ್ಗೆಯಿಂದ ಅಲ್ಲಲ್ಲಿ ಸಂಸ್ಥೆಯಲ್ಲಿರುವ ತರಬೇತಿ ಹಂತದ ಸಿಬ್ಬಂದಿ ಮತ್ತು ಮೆಕಾನಿಕ್‍ಗಳ ಮೂಲಕ ಕೆಲವೆಡೆ ಬಸ್ ಸಂಚಾರ ಆರಂಭಿಸಿದರು.  ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾ ನಿರತರು ಬಸ್‍ಗಳ ಸಂಚಾರಕ್ಕೂ ಅಡ್ಡಿಪಡಿಸಿ ಬಸ್ ಓಡಿಸುತ್ತಿದ್ದ ಸಿಬ್ಬಂದಿಗಳ ಮೇಲೆ ಹಲ್ಲೆ ಯತ್ನ ನಡೆಸಿರುವ ಘಟನೆಗಳು ಜರುಗಿವೆ.

ಮಾತುಕತೆಗೆ ಬನ್ನಿ: ನಿಮ್ಮ ಪ್ರತಿಭಟನೆಯನ್ನು ಕೈಬಿಟ್ಟು ಮಾತುಕತೆಗೆ ಬನ್ನಿ ಎಂದು ಸರ್ಕಾರ ಪದೇ ಪದೇ ನೌಕರರಿಗೆ ಮನವಿ ಮಾಡಿಕೊಂಡರೂ ಪ್ರತಿಭಟನಾನಿರತರು ಸೊಪ್ಪು ಹಾಕುತ್ತಿಲ್ಲ. ಖುದ್ದು ಸಾರಿಗೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ನಾನೇ ಮಾತುಕತೆಗೆ ಬರುತ್ತೇನೆ ಎಂದು ಹೇಳಿದರೂ ನೌಕರರು ಮಾತ್ರ ಜಪ್ಪಯ್ಯ ಎನ್ನುತ್ತಿಲ್ಲ.
ಕೆಲವು ಸಮಾಜಘಾತುಕ ಶಕ್ತಿಗಳು ಪರಿಸ್ಥಿಯ ಲಾಭ ಪಡೆಯಬಹುದೆಂದು ಗುಪ್ತಚರ ವಿಭಾಗ ಸರ್ಕಾರಕ್ಕೆ ಮಾಹಿತಿ ನೀಡಿದೆ. ಪ್ರತಿಭಟನೆಯಲ್ಲಿ 10ಕ್ಕೂ ಹೆಚ್ಚು ಸಂಘಟನೆಗಳು ಭಾಗಿಯಾಗಿದ್ದು, ಇದರ ಕಿಚ್ಚು ರಾಜ್ಯಾದ್ಯಂತ ವ್ಯಾಪಿಸಿದೆ. ತಕ್ಷಣವೇ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕೆಂದು ಸಿಎಂಗೆ ಮನವರಿಕೆ ಮಾಡಿದೆ.

ಕೆಎಸ್‍ಆರ್‍ಟಿಸಿಯ 93 ಮತ್ತು ಬಿಎಂಟಿಸಿಯ 91 ಬಸ್‍ಗಳು ಕಾರ್ಯಾಚರಣೆ ಆರಂಭಿಸಿವೆ. ಮಂಗಳೂರು ವಿಭಾಗದಲ್ಲಿ 87, ಶಿವಮೊಗ್ಗದಲ್ಲಿ 3, ದಾವಣಗೆರೆ 2 ಮತ್ತು ಚಿತ್ರದುರ್ಗ ವಿಭಾಗದಿಂದ 1 ಬಸ್ ಕಾರ್ಯಾಚರಣೆ ಮಾಡಿದೆ. ಬೆಳಿಗ್ಗೆ 8ರ ವೇಳೆಗೆ ಉಳಿದ ವಿಭಾಗಗಳಲ್ಲಿ ಯಾವುದೇ ಬಸ್ ಕಾರ್ಯಾಚರಣೆ ಆಗಿಲ್ಲ ಎಂದು ಕೆಎಸ್‍ಆರ್‍ಟಿಸಿ ತಿಳಿಸಿದೆ.
ಮುಷ್ಕರ ವಿರೋಧಿಸುತ್ತಿರುವ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದಾರೆ. ಅವರ ಜತೆಗೆ ನಿರ್ವಾಹಕ ಮತ್ತು ಚಾಲಕ ಹುದ್ದೆಯಿಂದ ಸಂಚಾರ ನಿಯಂತ್ರಕ (ಟಿ.ಸಿ) ಹುದ್ದೆಗೆ ಬಡ್ತಿ ಹೊಂದಿದವರನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂದು ಒತ್ತಾಯಿಸಿ, ಸಾರಿಗೆ ನಿಗಮಗಳ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಇಂದು ಕೂಡ ಮುಂದುವರಿದಿದೆ.ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮೆಟ್ರೋ ನಿಗಮ ಹೆಚ್ಚುವರಿ ರೈಲುಗಳನ್ನು ಓಡಿಸಲು ಮುಂದಾಗಿದೆ.

ನೇರಳೆ ಹಾಗೂ ಹಸಿರು ಮಾರ್ಗದಲ್ಲಿ ಹೆಚ್ಚುವರಿ ಮೆಟ್ರೋ ರೈಲುಗಳು ಇಂದು ಸಂಚರಿಸುತ್ತಿವೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಸ್ತಬ್ಧವಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಬೆಂಗಳೂರು ಮೆಟ್ರೋದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬಸ್ ಸಂಚಾರ ಸ್ಥಗಿತವಾಗಿದ್ದರಿಂದ ನಿನ್ನೆ ಮೆಟ್ರೋದಲ್ಲಿ ಜನದಟ್ಟಣೆ ಉಂಟಾಗಿತ್ತು. ಇಂದು ಕೂಡ ಮುಷ್ಕರ ಮುಂದುವರೆದಿರುವುದರಿಂದ ನಮ್ಮ ಮೆಟ್ರೋ ನಿಗಮದ ಬಳಿ ಇರುವ 50 ರೈಲುಗಳನ್ನು ಓಡಿಸಲು ತೀರ್ಮಾನ ಮಾಡಲಾಗಿದೆ.

000000

Facebook Comments