ನವದೆಹಲಿ, ಜ.24- ಓಮಿಕ್ರಾನ್ ರೂಪಾಂತರಿ ಸೋಂಕಿನೊಂದಿಗೆ ಕೊರೊನಾ ಯುಗವೂ ಮುಗಿಯುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ನಿರ್ದೇಶಕ ಹ್ಯಾನ್ಸ್ ಕ್ಲೂಗೆ ಹೇಳಿದ್ದಾರೆ. ಸುದ್ದಿಸಂಸ್ಥೆ ಫ್ರಾನ್ಸ್-ಪ್ರೆಸ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು,ಯೂರೋಪಿನಲ್ಲಿ ಮಾರ್ಚ್ ವೇಳೆಗೆ ಶೇ.60ರಷ್ಟು ಜನರಿಗೆ ಸೋಂಕು ಹರಡಲಿದೆ. ನಿಧಾನ ಗತಿಯಲ್ಲಿಲ ಸಾಂಕ್ರಾಮಿಕ ಸೋಂಕಿನ ಆಟ ಮುಗಿಯುತ್ತಿದೆ. ಬಹುಶಃ ಓಮಿಕ್ರಾನ್ ನಶಿಸಿದ ಜೊತೆಯಲ್ಲಿ ಕೊರೊನಾವೂ ಮುಕ್ತಾಯವಾಗಲಿದೆ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಲಸಿಕೆಯಿಂದ ಹಲವು ತಿಂಗಳುಗಳವರೆಗೂ ಜಾಗತಿಕ ರೋಗನಿರೋಧಕ ಶಕ್ತಿ ಇರುತ್ತದೆ. ಸೋಂಕು ತಗುಲಿ ಗುಣಮುಖವಾದ ಬಳಿಕ ಅದು ಮತ್ತಷ್ಟು ಹೆಚ್ಚಾಗಲಿದೆ. ಸೋಂಕು ಕಡಿಮೆ ಪ್ರಾಬಲ್ಯವನ್ನು ಹೊಂದಿರಲಿದೆ. ಮತ್ತೆ ರೋಗ ಬರುವುದಿಲ್ಲ, ಒಂದು ವೇಳೆ ಬಂದರೂ ಅದರ ಪರಿಣಾಮ ಅಪಾಯಕಾರಿಯಾಗಿರುವುದಿಲ್ಲ ಎಂದಿದ್ದಾರೆ.
ಅಮೆರಿಕಾದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ ಆಂಥೋನಿ ಫೌಸಿ ಇದೇ ರೀತಿಯ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ. ಅಮೆರಿಕಾದ ಕೆಲವು ಭಾಗಗಳಲ್ಲಿ ಕೋವಿಡ್ -19 ಪ್ರಕರಣಗಳು ತೀವ್ರವಾಗಿ ಇಳಿಮುಖವಾಗುವುದರೊಂದಿಗೆ, ಶೀಘ್ರದಲ್ಲೇ ಇಡೀ ದೇಶದಾದ್ಯಂತ ಒಂದು ತಿರುವು ಉಂಟಾಗಬಹುದು ಎಂದು ಫೌಸಿ ಹೇಳಿದ್ದಾರೆ.
ಓಮಿಕ್ರಾನ್ ರೂಪಾಂತರದ ಪ್ರಭಾವದ ನಾಲ್ಕನೇ ತರಂಗದ ನಂತರ ಮೊದಲ ಬಾರಿಗೆ ಆಫ್ರಿಕಾ ಪ್ರದೇಶದಲ್ಲಿ ಸಾವುಗಳು ಕಡಿಮೆಯಾಗುತ್ತಿವೆ ಎಂದು ವಿಶ್ವಸಂಸ್ಥೆ ಹೇಳಿದೆ. ಕೊರೊನಾ ವಿಷಯದಲ್ಲಿ ಹಲವು ಬಗೆಯ ಅಭಿಪ್ರಾಯಗಳು ಮೊದಲಿನಿಂದಲೂ ಕೇಳಿ ಬರುತ್ತಿವೆ. ಓಮಿಕ್ರಾನ್ ವ್ಯಾಪಕವಾಗಿ ಹರಡುವುದರೊಂದಿಗೆ, ಇತರ ರೂಪಾಂತರಗಳು ಬರಬಹುದು ಎಂದು ಕೆಲವು ತಜ್ಞರು ಶಂಕೆ ವ್ಯಕ್ತ ಪಡಿಸಿದ್ದಾರೆ.
ಯುರೋಪಿಯನ್ ಯೂನಿಯನ್ ಹೆಲ್ತ್ ಏಜೆನ್ಸಿ ಪ್ರಕಾರ, ಒಮಿಕ್ರಾನ್ ಪ್ರಬಲ ರೂಪಾಂತರವಾಗಿದೆ. ಜನವರಿ 18 ರ ಹೊತ್ತಿಗೆ 53 ದೇಶಗಳಿಗೆ ವ್ಯಾಪಿಸಿದೆ ಎಂದು ವಿಶ್ವಸಂಸ್ಥೆ ಈ ಮೊದಲು ತಿಳಿಸಿತ್ತು.
