ಬೆಂಗಳೂರು, ಫೆ.16- ಮದುವೆ ನಿಶ್ಚಿಯವಾಗಿದ್ದ ಸ್ನೇಹಿತನ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದಾಗ ಆಯಾ ತಪ್ಪಿ ಕಟ್ಟಡದ 5ನೇ ಮಹಡಿಯಿಂದ ಬಿದ್ದು, ಇವೆಂಟ್ ಮ್ಯಾನೇಜ್ಮೆಂಟ್ ಮಾಡುತ್ತಿದ್ದ ಗೆಳೆಯ ಮೃತಪಟ್ಟಿರುವ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ.
ಲಗ್ಗೆರೆ ನಿವಾಸಿ ಗೌತಮ್(27) ಮೃತಪಟ್ಟ ಯುವಕ. ಈತ ಮದುವೆ, ಹುಟ್ಟುಹಬ್ಬ ಇನ್ನಿತರ ಸಭೆ ಸಮಾರಂಭಗಳಿಗೆ ಇವೆಂಟ್ ಮ್ಯಾನೇಜ್ಮೆಂಟ್ ಮಾಡುತ್ತಿದ್ದನು. ಮಡಿವಾಳದ ಟೀಚರ್ಸ್ ಕಾಲೋನಿಯ 1ನೇ ಮುಖ್ಯರಸ್ತೆಯ ಲಕ್ಷ್ಮೀ ನಿಲಯದ 5ನೇ ಮಹಡಿಯಲ್ಲಿ ವಾಸವಾಗಿರುವ ಮೂಲತಃ ಆಂಧ್ರಪ್ರದೇಶದ ಪ್ರದೀಪ್ ಹಾಗೂ ಲಗ್ಗೆರೆ ನಿವಾಸಿ ಗೌತಮ್ ಸ್ನೇಹಿತರಾಗಿದ್ದು, ಇವರಿಬ್ಬರು ಇವೆಂಟ್ ಮ್ಯಾನೇಜ್ಮೆಂಟ್ ಮಾಡುತ್ತಿದ್ದರು.
ಪ್ರದೀಪ್ಗೆ ಮಾರ್ಚ್ನಲ್ಲಿ ಮದುವೆ ನಿಶ್ಚಯವಾಗಿದೆ. ಈ ಹಿನ್ನೆಲೆಯಲ್ಲಿ ಈತನ ಕುಟುಂಬಸ್ಥರು ಹಾಗೂ ಹೆಣ್ಣಿನ ಕಡೆಯವರು ನಿನ್ನೆ ಮದುವೆ ಬಟ್ಟೆ, ಆಭರಣ ಹಾಗೂ ಇನ್ನಿತರ ಮದುವೆಗೆ ಬೇಕಾದ ವಸ್ತುಗಳನ್ನು ಶಾಪಿಂಗ್ ಮಾಡಲು ಬಂದಿದ್ದು, ಇವರೊಂದಿಗೆ ಗೌತಮ್ ಸಹ ಹೋಗಿದ್ದನು.
ಪ್ರದೀಪ್ ಮದುವೆ ನಿಮಿತ್ತ ಆಂಧ್ರಗೆ ಹೋಗುತ್ತಿದ್ದುದ್ದರಿಂದ ಸ್ನೇಹಿತರೆಲ್ಲ ಸೇರಿ ಪಾರ್ಟಿ ಮಾಡಲು ನಿರ್ಧರಿಸಿದ್ದಾರೆ. ಅದರಂತೆ ಪ್ರದೀಪ್ ವಾಸವಾಗಿದ್ದ ಮನೆಯ 5ನೇ ಮಹಡಿಯಲ್ಲಿ ರಾತ್ರಿ ಸ್ನೇಹಿತರೆಲ್ಲಾ ಸೇರಿ ಪಾರ್ಟಿ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿ ಗೌತಮ್ ಕಾಲು ಜಾರಿ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಮಡಿವಾಳ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಸೆಂಟ್ಜಾನ್ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
#EngagementParty, #YoungMan, #dies, #falling, #5thfloor, #drunk,