ಬೆಂಗಳೂರು, ಜ.2- ಪೊಲೀಸರ ಸೋಗಿನಲ್ಲಿ ಇಂಜಿನಿಯರ್ ಮನೆಗೆ ಬಂದು 19 ಲಕ್ಷ ರೂ.ನಗದು ಅರ್ಧ ಕೆ.ಜಿ ಚಿನ್ನಾಭರಣವನ್ನು ದರೋಡೆ ಮಾಡಿಕೊಂಡು ಪರಾರಿಯಾಗಿರುವ ಆರೋಪಿಗಳ ಸುಳಿವು ಮಹಾಲಕ್ಷ್ಮಿಲೇಔಟ್ ಪೊಲೀಸರಿಗೆ ದೊರೆತಿದೆ. ಪರಾರಿಯಾಗಿರುವ ದರೋಡೆ ಕೋರರ ಬಂಧನಕ್ಕಾಗಿ ರಚಿಸಲಾಗಿರುವ 3 ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿವೆ.
ದರೋಡೆ ಪ್ರಕರಣ ದಾಖಲಾಗುತ್ತಿದ್ದಂತೆ ನಮ್ಮ ಪೊಲೀಸರು ತನಿಖೆ ಕೈಗೊಂಡು ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಆದಷ್ಟು ಬೇಗ ದರೋಡೆ ಕೋರರನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದು ತಂಡ ನಗರದಲ್ಲೆ ಇದ್ದು, ಇನ್ನೆರೆಡು ತಂಡ ಹೊರ ಜಿಲ್ಲೆಗಳಿಗೆ ಹೋಗಿದ್ದು , ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿವೆ ಎಂದು ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.
ಮಹಾಲಕ್ಷ್ಮಿ ಲೇಔಟ್ 2ನೇ ಹಂತದ ಆದೀತ್ ಹೊಟೇಲ್ ಹಿಂಭಾಗದ ನಿವಾಸಿ ಸಿವಿಲ್ ಇಂಜಿನಿಯರ್ ಸಾಮ್ಯ ನಾಯ್ಕ್ ಮನೆಗೆ ಶುಕ್ರವಾರ ಮಧ್ಯಾಹ್ನ ಪೊಲೀಸರ ಸೋಗಿನಲ್ಲಿ ಬಂದ ಮೂವರು ದರೋಡೆ ಕೋರರು ಗನ್ ಮತ್ತು ಚಾಕುವಿನಿಂದ ಕುಟುಂಬದವರನ್ನು ಬೆದರಿಸಿ ಮನೆಯನ್ನು ಜಾಲಾಡಿ 19 ಲಕ್ಷ ರೂ.ನಗದು, 500 ಗ್ರಾಂ ಚಿನ್ನದ ಆಭರಣಗಳನ್ನು ತೆಗೆದುಕೊಂಡರು.
ನಂತರ ಸಾಮ್ಯ ನಾಯ್ಕ್ ಮತ್ತು ಅವರ ಮಗನನ್ನು ಕಾರಿನಲ್ಲಿ ಕರೆದುಕೊಂಡು ಹೋದ ಆರೋಪಿಗಳು ನಗರದಲ್ಲಿ ಸುತ್ತಾಡಿಸಿ 20 ಲಕ್ಷ ರೂ. ಕೊಡುವಂತೆ ಒತ್ತಾಯಿಸಿ, ಕೊನೆಗೆ ಪ್ರಾಣ ಬೆದರಿಕೆ ಹಾಕಿ ಗಂಗಮ್ಮ ಸರ್ಕಲ್ ಬಳಿ ಇಳಿಸಿ ತಾವು ಕರೆದಾಗ ವಿಚಾರಣೆಗೆ ಬರಬೇಕೆಂದು ತಿಳಿಸಿ ಹಾಕಿ ದರೋಡೆ ಕೋರರು ಕಾರಿನಲ್ಲಿ ಪರಾರಿ ಯಾಗಿದ್ದಾರೆ.
ಈ ಬಗ್ಗೆ ಸಾಮ್ಯ ನಾಯ್ಕ್ ಅವರು, ಮಹಾಲಕ್ಷ್ಮಿ ಲೇಔಟ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅವರ ಮನೆಯ ಸುತ್ತ ಮುತ್ತಲಿನ ರಸ್ತೆಗಳ ಸಿಸಿಟಿವಿ ಪುಟೇಜ್ ಗಳನ್ನು ಪಡೆದು ತನಿಖೆ ಮುಂದುವರೆಸಿದ್ದಾರೆ.
