ಬ್ರಹ್ಮಗಿರಿ ಬೆಟ್ಟದಲ್ಲಿ ಟ್ರಕ್ಕಿಂಗ್ ಹೋಗಿ ಪ್ರಪಾತಕ್ಕೆ ಬಿದ್ದಿದ್ದ ಯುವಕನನ್ನು ರಕ್ಷಿಸಿದ NDRF

Social Share

ಚಿಕ್ಕಬಳ್ಳಾಪುರ, ಫೆ.21- ತಾಲ್ಲೂಕಿನ ಐತಿಹಾಸಿಕ ಪ್ರವಾಸಿತಾಣ ನಂದಿಬೆಟ್ಟದಲ್ಲಿ ಟ್ರಕ್ಕಿಂಗ್ ಮಾಡುವಾಗ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಪ್ರಾಣಾಪಾಯಕ್ಕೆ ಸಿಲುಕಿದ್ದ ಯುವಕನನ್ನು ಜಿಲ್ಲಾ ಪೊಲೀಸ್ ಇಲಾಖೆ, ಅಗ್ನಿಶಾಮಕದಳ, ಎನ್‍ಡಿಆರ್‍ಎಫ್ ಹರಸಾಹಸಪಟ್ಟು ಕಾಪ್ಟರ್ ಸಹಾಯದಿಂದ ರಕ್ಷಣೆ ಮಾಡಲಾಗಿದೆ.
ದೆಹಲಿ ಮೂಲದ ವಿದ್ಯಾರ್ಥಿ ನಿಶಾಂಕ್ ಎಂಬಾತನೇ ಟ್ರಕ್ಕಿಂಗ್ ಮಾಡಲು ಹೋಗಿ ಪ್ರಪಾತಕ್ಕೆ ಬಿದ್ದು ನರಕಯಾತನೆ ಅನುಭವಿಸಿದ ಯುವಕ.
ಯುವಕ ನಿಶಾಂಕ್ ಬೆಂಗಳೂರಿನ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ವ್ಯಾಸಂಗ ಮಾಡುತ್ತಿದ್ದು, ಈತ ಮೂಲತಃ ದೆಹಲಿಯವರು ಎಂದು ತಿಳಿದು ಬಂದಿದೆ.
ಕೋವಿಡ್ ಹೊಸ ನಿಯಮಗಳು ಜಾರಿಗೆ ಬಂದ ಮೇಲೆ ನಂದಿಬೆಟ್ಟದ ಪ್ರವೇಶಕ್ಕೆ ವಾರಾಂತ್ಯದ ವೇಳೆ ಪ್ರವಾಸಿಗರ ಭೇಟಿಯನ್ನು ನಿರ್ಬಂಸಲಾಗಿದೆ. ಆದರೂ ನಂದಿಬೆಟ್ಟಕ್ಕೆ ಬಂದ ನಿಶಾಂಕ್, ಅಲ್ಲಿನ ಚೆಕ್‍ಪೋಸ್ಟ್ ಬಳಿ ವಾಹನವನ್ನು ಪಾರ್ಕ್ ಮಾಡಿ ಬ್ರಹ್ಮಗಿರಿ ಮಾರ್ಗವಾಗಿ ನಂದಿಬೆಟ್ಟಕ್ಕೆ ಟ್ರಕ್ಕಿಂಗ್ ಮಾಡಲು ಹೊರಟಿದ್ದಾರೆ. ಬೆಟ್ಟವನ್ನು ಏರುವಾಗ ಆಯತಪ್ಪಿ ನಿಶಾಂಕ್ ಸುಮಾರು 250-300 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದಾನೆ.
ಅದೃಷ್ಟವಶಾತ್ ಆತನ ಬಳಿ ಮೊಬೈಲ್ ಇತ್ತು. ತಕ್ಷಣ ಸಹಾಯಕ್ಕಾಗಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ರಕ್ಷಣೆಗೆ ಮನವಿ ಮಾಡಿದ್ದಾ ನೆ. ಕೂಡಲೇ ಕಾರ್ಯಾಚರಣೆಗಿಳಿದ ಜಿಲ್ಲಾ ಪೊಲೀಸರು, ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಕಾರ್ಯಾಚರಣೆ ನಡೆಸಿದವು. ಅಲ್ಲದೆ, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಸಹಾಯ ಪಡೆದು ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಯುವಕನ ರಕ್ಷಣೆ ಮಾಡಿದವು.
ಇನ್ನು ಪ್ರಪಾತಕ್ಕೆ ಬಿದ್ದು ಸಣ್ಣಪುಟ್ಟ ತರಚಿದ ಗಾಯಗಳಿಂದ ನಿತ್ರಾಣಗೊಂಡ ನಿಶಾಂಕ್‍ನನ್ನು ರಕ್ಷಣೆ ಮಾಡಲಾಗಿದೆ. ಆತ ಸಿಲುಕಿದ್ದ ಅಪಾಯಕಾರಿ ಜಾಗಕ್ಕಿಂತ ಕೆಳಕ್ಕೆ ಇನ್ನೂ 300 ಅಡಿ ಆಳದ ಪ್ರಪಾತವಿತ್ತು. ಸ್ವಲ್ಪ ಆಯತಪ್ಪಿದ್ದರೆ ಆತ ಆ ಪ್ರಪಾತಕ್ಕೆ ಬಿದ್ದು ಜೀವ ಕಳೆದುಕೊಳ್ಳುವ ಸ್ಥಿತಿ ಇತ್ತು. ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿಬಂದಿದ್ದಾನೆ ಎಂದು ಪೊಲೀಸ್ ವರಿಷ್ಠಾಕಾರಿ ಜಿ.ಕೆ.ಮಿಥುನ್ ಕುಮಾರ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಗಾಯಗೊಂಡ ಯುವಕನನ್ನು ಬೆಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
# ಮೆಚ್ಚುಗೆ:
ಪೊಲೀಸ್, ಅಗ್ನಿಶಾಮಕ, ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಹಾಗೂ ಭಾರತೀಯ ವಾಯುಪಡೆಯ ಹರಸಾಹಸಪಟ್ಟು ವ್ಯವಸ್ಥಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ ತಂಡಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Articles You Might Like

Share This Article