ಎಸ್ಕಾಂಗೆ ಸರ್ಕಾರಿ ಇಲಾಖೆಗಳಿಂದಲೇ 10,099 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ

ಬೆಂಗಳೂರು,ಮೇ 23- ಜನಸಾಮಾನ್ಯರು ವಿದ್ಯುತ್ ಶುಲ್ಕ ಕಟ್ಟದಿದ್ದರೆ ಕ್ಷಣಾರ್ಧದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಕಾರ್ಯಕ್ಕೆ ಮುಂದಾಗುವ ಇಂಧನ ಇಲಾಖೆ, ಕೋಟಿ ಕೋಟಿ ವಿದ್ಯುತ್ ಶುಲ್ಕವನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಅದೇ ಸರ್ಕಾರಿ ಇಲಾಖೆಗಳ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ.

ಎಸ್ಕಾಂಗಳು ವಿದ್ಯುತ್ ಶುಲ್ಕ ಪಾವತಿಸದಿರುವ ವಿವಿಧ ಇಲಾಖೆಗಳಿಗೆ ನೋಟಿಸ್ ಜಾರಿ ಮಾಡಿದ್ದರೂ ಇಲಾಖೆಗಳು ಮಾತ್ರ ಇದಕ್ಕೆ ಕ್ಯಾರೇ ಅಂದಿಲ್ಲ.
ಇಂಧನ ಇಲಾಖೆಗೆ ಬಾಕಿ ಉಳಿದುಕೊಂಡಿರುವ ವಿದ್ಯುತ್ ಶುಲ್ಕವನ್ನು ವಸೂಲಿ ಮಾಡುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ವಿವಿಧ ಸರ್ಕಾರಿ ಇಲಾಖೆಗಳೇ ಇಂಧನ ಇಲಾಖೆಗೆ ಸಾವಿರಾರು ಕೋಟಿ ವಿದ್ಯುತ್ ಬಿಲ್ ಪಾವತಿಸದೇ ಇರುವುದು ಇನ್ನಷ್ಟು ತ್ರಾಸದಾಯಕವಾಗಿದೆ.

ಜನಸಾಮಾನ್ಯ ವಿದ್ಯುತ್ ಶುಲ್ಕವನ್ನು ಕಟ್ಟದೇ ಇದ್ದರೆ, ವಿದ್ಯುತ್ ಸಂಪರ್ಕ ಕಡಿತ ಮಾಡಲು ಮುಂದಾಗುವ ಎಸ್ಕಾಂಗಳು, ಅದೇ ವಿವಿಧ ಸರ್ಕಾರಿ ಇಲಾಖೆಗಳ ಬಾಕಿ ಶುಲ್ಕ ಪಾವತಿಸದೇ ಇರುವ ಬಗ್ಗೆ ತುಟಿ ಬಿಚ್ಚಿಲ್ಲ. ಸರ್ಕಾರಿ ಇಲಾಖೆಗಳೇ ಇಂಧನ ಇಲಾಖೆಗೆ ಸಾವಿರಾರು ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ.

ಮೈ ತುಂಬಾ ಸಾಲ ಮಾಡಿ ಪ್ರತಿ ವರ್ಷ ವಿದ್ಯುತ್ ಖರೀದಿ ಮಾಡುವ ಎಸ್ಕಾಂಗಳಿಗೆ ಕೋಟಿ ಕೋಟಿ ಬಾಕಿ ವಿದ್ಯುತ್ ಶುಲ್ಕ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಇದರಿಂದ ಇಂಧನ ಇಲಾಖೆಯ ಕಾರ್ಯಕ್ಷಮತೆಯೂ ಕುಂಠಿತವಾಗಿದೆ. ಅಷ್ಟಕ್ಕೂ ವಿವಿಧ ಇಲಾಖೆಗಳ ವಿದ್ಯುತ್ ಶುಲ್ಕ ಪಾವತಿಸಲು ಬಾಕಿ ಇರುವ ಮೊತ್ತ ನೋಡಿದರೆ ಎಲ್ಲರೂ ನಿಬ್ಬೆರಗಾಗುವುದು ಖಚಿತ.

ಎಸ್ಕಾಂಗಳಿಗೆ ಸರ್ಕಾರಿ ಇಲಾಖೆಗಳ ಬಾಕಿ ವಿದ್ಯುತ್ ಶುಲ್ಕದ ವಸೂಲಾತಿಯದ್ದೇ ದೊಡ್ಡ ತಲೆನೋವು. ಪ್ರತಿವರ್ಷ ಬಾಕಿ ವಿದ್ಯುತ್ ಶುಲ್ಕ ಬೆಟ್ಟದಷ್ಟು ಬೆಳೆಯುತ್ತಿದೆ. ಆದರೆ ಸರ್ಕಾರಿ ಇಲಾಖೆಗಳು ಮಾತ್ರ ಅದರ ಪಾವತಿಗೆ ಹೆಚ್ಚಿನ ತಲೆಕೆಡಿಸಿಕೊಳ್ಳುತ್ತಿದ್ದಂತೆ ಕಾಣುತ್ತಿಲ್ಲ. ವಿವಿಧ ಇಲಾಖೆಗಳಿಂದ ಎಸ್ಕಾಂಗಳಿಗೆ ಬರೋಬ್ಬರಿ 6,670 ಕೋಟಿ ರೂ. ವಿದ್ಯುತ್ ಶುಲ್ಕ ಪಾವತಿಸಲು ಬಾಕಿ ಇದೆ.

ಏಪ್ರಿಲ್ 1, 2021ಕ್ಕೆ ವಿವಿಧ ಸರ್ಕಾರಿ ಇಲಾಖೆಗಳು 5,530 ಕೋಟಿ ರೂ. ಬಾಕಿ ವಿದ್ಯುತ್ ಶುಲ್ಕ ಪಾವತಿಸಬೇಕಿತ್ತು. 2021-22ರ ಸಾಲಿನಲ್ಲಿ ವಿವಿಧ ಇಲಾಖೆಗಳು 4,569 ಕೋಟಿ ರೂ. ವಿದ್ಯುತ್ ಶುಲ್ಕವನ್ನು ಪಾವತಿಸಬೇಕಿತ್ತು. ಈ ಮೂಲಕ ವಿದ್ಯುತ್ ಶುಲ್ಕವನ್ನು ಪಾವತಿ ಮಾಡದೇ 2021-22ರ ಸಾಲಿಗೆ ಬರೋಬ್ಬರಿ 10,099 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿದುಕೊಂಡಿತ್ತು.

ಬಳಿಕ ಸ್ವಲ್ಪ ಮಟ್ಟಿಗೆ ವಿದ್ಯುತ್ ಬಿಲ್ ಪಾವತಿಸಿರುವ ಹಿನ್ನೆಲೆ ಮಾರ್ಚ್ ಅಂತ್ಯಕ್ಕೆ ವಿವಿಧ ಇಲಾಖೆಗಳ ಒಟ್ಟು ಬಾಕಿ ವಿದ್ಯುತ್ ಬಿಲ್ 6,670 ಕೋಟಿ ರೂ. ಇನ್ನು ಬಾಕಿ ಇದೆ. ಅದರಲ್ಲೂ ಗ್ರಾಮೀಣಾಭಿವೃದ್ಧಿ ಇಲಾಖೆ ಅತಿ ಹೆಚ್ಚು ಅಂದರೆ 4726 ಕೋಟಿ ರೂ. ಶುಲ್ಕ ಬಾಕಿ ಉಳಿಸಿಕೊಂಡಿದೆ. ಬಿಬಿಎಂಪಿ 538 ಕೋಟಿ ರೂ. ಬಾಕಿ ಇದೆ.

ವಿವಿಧ ಇಲಾಖೆಗಳು ಹಲವು ವರ್ಷಗಳಿಂದ ವಿದ್ಯುತ್ ಶುಲ್ಕವನ್ನು ಬಾಕಿ ಉಳಿಸಿಕೊಂಡಿರುವ ಕಾರಣ ಇದರ ಬಡ್ಡಿ ಮೊತ್ತವೇ 1,286 ಕೋಟಿ ರೂ. ಪಾವತಿಸಬೇಕಾಗಿದೆ. ನೋಟಿಸ್‍ಗೂ ಕ್ಯಾರೇ ಎನ್ನದ ಇಲಾಖೆಗಳು: ಸಾವಿರಾರು ಕೋಟಿ ವಿದ್ಯುತ್ ಬಿಲ್ ಉಳಿಸಿಕೊಂಡಿರುವ ಸರ್ಕಾರಿ ಇಲಾಖೆಗಳಿಗೆ ಎಸ್ಕಾಂಗಳು ನೋಟಿಸ್ ನೀಡಿದ್ದರೂ ಸರ್ಕಾರಿ ಇಲಾಖೆಗಳು ಇದಕ್ಕೆ ಕ್ಯಾರೇ ಅಂದಿಲ್ಲ.

ಜೊತೆಗೆ ವಿವಿಧ ಇಲಾಖೆಗಳ ಬಾಕಿ ವಿದ್ಯುತ್ ಶುಲ್ಕವೂ ಕರಗುತ್ತಿಲ್ಲ. 2021-22ನೇ ಸಾಲಿನಲ್ಲಿ ವಿವಿಧ ಇಲಾಖೆಗಳು ಎಸ್ಕಾಂಗಳಿಗೆ ಬರೋಬ್ಬರಿ 10,099 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿತ್ತು. ಈ ಪೈಕಿ ಎಸ್ಕಾಂಗಳು 2021-22ನೇ ಸಾಲಿನಲ್ಲಿ ಎಲ್ಲಾ ಇಲಾಖೆಗಳಿಂದ ಕಷ್ಟಪಟ್ಟು 3,429 ಕೋಟಿ ರೂ. ಮಾತ್ರ ವಸೂಲಾತಿ ಮಾಡಿಕೊಂಡಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಸುಮಾರು 616 ಕೋಟಿ ರೂ. ಮಾತ್ರ ವಸೂಲಾತಿ ಮಾಡಲು ಸಾಧ್ಯವಾಗಿದೆ. ನಗರಾಭಿವೃದ್ಧಿ ಇಲಾಖೆಯಿಂದ 1,521 ಕೋಟಿ ರೂ. ವಸೂಲಾತಿ ಮಾಡಲಾಗಿದೆ. ಬಿಬಿಎಂಪಿಯಿಂದ 264 ಕೋಟಿ ರೂ. ವಸೂಲಾತಿ ಮಾಡಲು ಸಾಧ್ಯವಾಗಿದ್ದರೆ, ಜಲಮಂಡಳಿಯಿಂದ 30.27 ಕೋಟಿ ರೂ. ವಸೂಲಾತಿ ಮಾಡಲು ಸಾಧ್ಯವಾಗಿದೆ. ವರ್ಷಾಂತ್ಯದಲ್ಲಿ ಬಾಕಿ ವಿದ್ಯುತ್ ಬಿಲ್ ಪಾವತಿಸುವಂತೆ ಇಲಾಖೆಗಳಿಗೆ ನೋಟಿಸ್ ನೀಡಿದರೂ ನಿರೀಕ್ಷಿತ ಫಲ ನೀಡಿಲ್ಲ ಎಂದು ಇಂಧನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಇಲಾಖೆಗಳು:
ಗ್ರಾಮೀಣಾಭಿವೃದ್ಧಿ ಇಲಾಖೆ- 4,726 ಕೋಟಿ
ವಾಣಿಜ್ಯ ಇಲಾಖೆ- 283.42 ಕೋಟಿ
ಬಿಬಿಎಂಪಿ- 538 ಕೋಟಿ
ಜಲಮಂಡಳಿ- 420.51 ಕೋಟಿ
ಕುಡಿಯುವ ನೀರು/ಬೀದಿ ದೀಪ- 297.63 ಕೋಟಿ
ಜಲಸಂಪನ್ಮೂಲ ಇಲಾಖೆ- 232.51 ಕೋಟಿ
ಸಣ್ಣ ನೀರಾವರಿ ಇಲಾಖೆ- 65.02 ಕೋಟಿ
ಆರೋಗ್ಯ ಇಲಾಖೆ- 10.42 ಕೋಟಿ
ಬಹು ಗ್ರಾಮ ಕುಡಿಯುವ ನೀರು ಸ್ಥಾವರ- 19.64 ಕೋಟಿ
ಕೊಳಚೆ ನಿರ್ಮೂಲನಾ ಮಂಡಳಿ- 14.60 ಕೋಟಿ