ಈಶ್ವರಪ್ಪ-ರಮೇಶ್ ಜಾರಕಿಹೊಳಿ ಮತ್ತೆ ಸಂಪುಟಕ್ಕೆ..?

Social Share

ಬೆಂಗಳೂರು : ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್. ಈಶ್ವರಪ್ಪ ಮತ್ತು ಅಶ್ಲೀಲ ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಕ್ಲೀನ್‍ಚಿಟ್ ಪಡೆದುಕೊಂಡಿದ್ದು, ಈ ಇಬ್ಬರೂ ಸಹ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಶೀಘ್ರದಲ್ಲಿಯೇ ಸೇರ್ಪಡೆಯಾಗುವುದು ಖಚಿತವಾಗಿದೆ.

ರಾಷ್ಟ್ರಪತಿ ಪ್ರಮಾಣವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ನಾಳೆ ಮುಖ್ಯಮಂತ್ರಿಗಳು ಮತ್ತೊಮ್ಮೆ ದೆಹಲಿಗೆ ತೆರಳಲಿದ್ದು, ಪಕ್ಷದ ಪ್ರಮು ಖರ ಜೊತೆ ಚರ್ಚಿಸಿದ ನಂತರ ಯಾವುದೇ ಕ್ಷಣದಲ್ಲೂ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ.

ಮಾಜಿ ಸಚಿವರಾದ ಕೆ.ಎಶ್.ಈಶ್ವರಪ್ಪ ರಮೇಶ್ ಜಾರಕಿಹೊಳಿ ರಾಜೀನಾಮೆ ಸರ್ಕಾರಕ್ಕೆ ಕಪ್ಪುಚುಕ್ಕೆಯಂತಾಗಿತ್ತು. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಸಂದರ್ಭದಲ್ಲಿ ಎರಡು ಪ್ರಬಲ ಸಮುದಾಯಗಳ ಹಿನ್ನೆಲೆ ಹೊಂದಿದ ನಾಯಕರಿಗೆ ಮತ್ತೆ ಮಣೆ ಹಾಕಿದಲ್ಲಿ ಅದು ಮುಂದಿನ ಅಧಿಕಾರಕ್ಕೆ ನೆರವಾಗುತ್ತದೆ ಎಂಬ ಲೆಕ್ಕಾಚಾರ ಇದೆ.

ಸದ್ಯ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ 5 ಸ್ಥಾನಗಳು ಖಾಲಿ ಇವೆ. ಸದ್ಯದ ಮಾಹಿತಿಯ ಪ್ರಕಾರ ಈ ಇಬ್ಬರು ನಾಯಕರನ್ನು ಮಾತ್ರ ಸಂಪುಟಕ್ಕೆ ತೆಗೆದುಕೊಳ್ಳಲಾಗುತ್ತದೆ. ಉಳಿದ ಯಾವ ಆಕಾಂಕ್ಷಿಗಳನ್ನೂ ಸಹ ಪರಿಗಣಿಸುವ ಸಾಧ್ಯತೆ ಇಲ್ಲ.

ಇವರಿಗೆ ಈ ಹಿಂದೆ ನೀಡಿದ್ದ ಖಾತೆಯಲ್ಲಿಯೇ ಮುಂದುವರಿಯುವ ಅವಕಾಶ ನೀಡುವ ಮೂಲಕ ರಾಜೀನಾಮೆಗೆ ಕಾರಣವಾದವರಿಗೆ ಸ್ಪಷ್ಟ ಉತ್ತರ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರಕ್ಕೆ ಜು.28ಕ್ಕೆ ವರ್ಷ ತುಂಬುತ್ತದೆ. ದೊಡ್ಡಬಳ್ಳಾಪುರದಲ್ಲಿ ದೊಡ್ಡ ಮಟ್ಟದ ಸಮಾವೇಶ ನಡೆಸಲು ಸಿದ್ಧತೆ ಮಾಡಲಾಗುತ್ತಿದೆ. ಇದಕ್ಕೆ ಮುನ್ನವೇ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾತು ಕೇಸರಿ ಪಾಳೆಯದಲ್ಲಿ ಪ್ರಬಲವಾಗಿ ಕೇಳಿಬರುತ್ತಿದೆ.

ಬಿಜೆಪಿ ಹೈಕಮಾಂಡ್ ನಾಯಕರು ಈ ಇಬ್ಬರೂ ನಾಯಕರ ವಿರುದ್ಧ ಸಲ್ಲಿಸಲಾಗಿರುವ ಬಿ-ರಿಪೋರ್ಟ್‍ಗಳ ಪ್ರತಿಯನ್ನು ದೆಹಲಿಗೆ ತರಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಮತ್ತೆ ಸಂಪುಟ ಸೇರ್ಪಡೆಗೆ ಒಪ್ಪಿಗೆ ಸೂಚಿಸಿದ್ದಾರೆ. ವಿಳಂಬ ಇಲ್ಲದೆ ಕೆಲವೇ ದಿನಗಳಲ್ಲಿ ಇಬ್ಬರು ನಾಯಕರು ಸಚಿವರಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕುರುಬ ಸಮುದಾಯದ ಕೆ.ಎಸ್.ಈಶ್ವರಪ್ಪ ಹಾಗೂ ಪರಿಶಿಷ್ಟ ಪಂಗಡ ವಾಲ್ಮೀಕಿ ಸಮುದಾಯಕ್ಕೆ ಸೇರಿದ ರಮೇಶ್ ಜಾರಕಿಹೊಳಿ ರಾಜೀನಾಮೆಗಳು ಸರ್ಕಾರಕ್ಕೆ ಸ್ವಲ್ಪ ಮಟ್ಟಿನ ಹಿನ್ನಡೆ ಆಗಿದ್ದವು. ಅದರಲ್ಲೂ ಗುತ್ತಿಗೆ ನೀಡುವಲ್ಲಿ ಲಂಚ ಪಡೆದ ಆರೋಪ ಸರ್ಕಾರವನ್ನು ಮುಜುಗರಕ್ಕೀಡು ಮಾಡಿತ್ತು.

ಇದು ಮುಂದಿನ ಚುನಾವಣೆಯ ಆಸ್ತ್ರವೂ ಆಗಬಹುದು. ಈ ಹಿನ್ನೆಲೆಯಲ್ಲಿ ಈ ಇಬ್ಬರು ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಒಂದಷ್ಟು ಚುನಾವಣಾ ನಷ್ಟ ತಪ್ಪಿಸಬಹುದು ಎಂಬ ಲೆಕ್ಕಾಚಾರವೂ ಬಿಜೆಪಿಗೆ ಇದೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರಿಗೆ ಬಿಜೆಪಿಯಲ್ಲಿ ನಿರಂತರ ಠಕ್ಕರ್ ಕೊಡುವುದಕ್ಕೆ ಈಶ್ವರಪ್ಪ ಇರಲೇಬೇಕಾಗುತ್ತದೆ.

ಇನ್ನು ಡಿ.ಕೆ.ಶಿವಕುಮಾರ್ ಜೊತೆ ರಾಜಕೀಯ ವೈರತ್ವ ಹೊಂದಿರುವ ರಮೇಶ್ ಜಾರಕಿಹೊಳಿ ಸಚಿವ ಸ್ಥಾನದಲ್ಲಿ ಇದ್ದರೆ ಡಿಕೆಶಿಯವರನ್ನು ಕಟ್ಟಿಹಾಕುವುದಕ್ಕೆ ತಂತ್ರಗಳನ್ನು ಎಣೆಯುತ್ತಾರೆ ಎಂಬ ಲೆಕ್ಕಾಚಾರ ಇದೆ.

Articles You Might Like

Share This Article