ಮಾಜಿ ಶಾಸಕರ ಇಬ್ಬರು ಮೊಮ್ಮಕ್ಕಳು ಹಳ್ಳದಲ್ಲಿ ಶವವಾಗಿ ಪತ್ತೆ..!
ರಾಯಚೂರು, ಮಾ.8- ಕುಟುಂಬದವರೊಂದಿಗೆ ಜಾತ್ರೆಗೆ ತೆರಳಿ ಕಾಣೆಯಾಗಿದ್ದ ಮಾಜಿ ಶಾಸಕರೊಬ್ಬರ ಇಬ್ಬರು ಮೊಮ್ಮಕ್ಕಳು ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಣ್ಣಯ್ಯ (7) ಮತ್ತು ವರುಣ (9) ಮೃತಪಟ್ಟಿರುವ ದುರ್ದೈವಿಗಳು.ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಬಲ್ಲಟಗಿ ಗ್ರಾಮಕ್ಕೆ ಮಾಜಿ ಶಾಸಕರಾದ ಹಂಪಯ್ಯ ನಾಯಕ್ ಅವರ ಮೊಮ್ಮಕ್ಕಳೂ ಕುಟುಂಬದವರೊಂದಿಗೆ ನಿನ್ನೆ ಜಾತ್ರೆಗೆ ಹೋಗಿದ್ದಾಗ ಕಾಣೆಯಾಗಿದ್ದರು.
ಕುಟುಂಬಸ್ಥರೆಲ್ಲಾ ಹುಡುಕಾಡಿದರೂ ಈ ಇಬ್ಬರ ಸುಳಿವು ಸಿಕ್ಕಿರಲಿಲ್ಲ. ನಂತರ ಇವರಿಬ್ಬರೂ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸುದ್ದಿ ತಿಳಿದು ಸಿರವಾರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.