“9 ಮತ್ತು 10ನೇ ತರಗತಿಗೂ ಆರ್‌ಟಿಇ ವಿಸ್ತರಿಸಿ” : ರುಪ್ಸಾ ಮನವಿ

Social Share

ಬೆಂಗಳೂರು,ಫೆ.26- ಆರ್‌ಟಿಇ ಕಾಯ್ದೆಯನ್ನು 9 ಮತ್ತು 10ನೇ ತರಗತಿಗಳಿಗೂ ವಿಸ್ತರಿಸುವಂತೆ ರುಪ್ಸಾ ಮನವಿ ಮಾಡಿಕೊಂಡಿದೆ. ಕಳೆದ 2009ರಿಂದ ಜಾರಿಗೆ ಬಂದಿರುವ ಆರ್‌ಟಿಇ ವ್ಯವಸ್ಥೆ ಕೇವಲ ಒಂದರಿಂದ ಎಂಟನೇ ತರಗತಿಗಳಿಗೆ ಮಾತ್ರ ಅನ್ವಯವಾಗುತ್ತಿದೆ. ಆದರೆ, ಒಂಬತ್ತು ಮತ್ತು ಹತ್ತನೆ ತರಗತಿ ವ್ಯಾಸಂಗ ಮಾಡಬೇಕಾದರೆ ಶುಲ್ಕ ಪಾವತಿಸಬೇಕಿದೆ ಈ ಅನ್ಯಾಯವನ್ನು ಸರಿಪಡಿಸಿ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕೋಟೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
9 ಮತ್ತು 10 ನೇ ತರಗತಿಗಳಿಗೆ ಆರ್‌ಟಿಇ ಅನ್ವಯವಾಗದ ಹಿನ್ನಲೆಯಲ್ಲಿ ಹಲವಾರು ವಿದ್ಯಾರ್ಥಿಗಳು ವರ್ಗಾವಣೆ ಪತ್ರ ಪಡೆದು ಬೇರೆ ಶಾಲೆಗಳಿಗೆ ಸೇರಿಕೊಳ್ಳುತ್ತಿದ್ದಾರೆ. ಇದುವರೆಗೂ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಆರ್‌ಟಿಇ ಮೂಲಕ ಶಾಲೆಗೆ ಸೇರುವ ಮಕ್ಕಳು ಎಂಟನೆ ತರಗತಿ ನಂತರ ಟಿಸಿ ಪಡೆದು ಮತ್ತೆ ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ.ವಿದ್ಯಾರ್ಥಿಗಳ ಪೋಷಕರು ಶಾಲೆಗಳು ಕೇಳುವಷ್ಟು ಶುಲ್ಕ ಪಾವತಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಈ ತಾರತಮ್ಯ ಹೋಗಬೇಕಾದರೆ, ಸರ್ಕಾರ ಆರ್‌ಟಿಇ ವ್ಯಾಪ್ತಿಗೆ ಒಂಬತ್ತು ಮತ್ತು ಹತ್ತನೆ ತರಗತಿಗಳನ್ನು ಒಳಪಡಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಈ ವರ್ಷದ ಶೈಕ್ಷಣಿಕ ವರ್ಷ ಮುಗಿಯುತ್ತಿದ್ದಂತೆ 9 ಮತ್ತು 10ನೇ ತರಗತಿಗಳಿಗೂ ಆರ್‌ಟಿಇ ಸೌಲಭ್ಯ ಕಲ್ಪಿಸಬೇಕು ಹಾಗೂ ಅದಕ್ಕೆ ಅವಶ್ಯವಿರುವ ಹಣವನ್ನು ಬಜೆಟ್‍ನಲ್ಲಿ ಮೀಸಲಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Articles You Might Like

Share This Article