ರಾಹುಲ್‍ ಗಾಂಧಿಯನ್ನು ಕಾಂಗ್ರೆಸ್‍ನಿಂದ ಉಚ್ಛಾಟಿಸುವಂತೆ ಬಿಜೆಪಿ ಆಗ್ರಹ

Social Share

ನವದೆಹಲಿ,ಡಿ.17- ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿಯನ್ನು ಎಐಸಿಸಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಕ್ಷಣವೇ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ರಾಹುಲ್‍ಗಾಂಧಿ ವಿರುದ್ಧ ಉಗ್ರವಾದ ಟೀಕೆಗಳನ್ನು ಮುಂದುವರೆಸಿರುವ ಬಿಜೆಪಿ, ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‍ನ ರಿಮೋಟ್ ಕಂಟ್ರೋಲ್ ಅಧ್ಯಕ್ಷರಲ್ಲ ಮತ್ತು ಪ್ರತಿಪಕ್ಷಗಳು ದೇಶದ ಜೊತೆ ನಿಲ್ಲಲಿವೆ ಎಂಬುದು ಸಾಬೀತುಪಡಿಸಬೇಕಾದರೆ ತಕ್ಷಣವೇ ರಾಹುಲ್‍ಗಾಂಧಿಯನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಆಗ್ರಹಿಸಿದೆ.

ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್‍ಗಾಂಧಿ ನಿನ್ನೆ ರಾಜಸ್ಥಾನದ ಜೈಪುರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಚೀನಾ ಭಾರತದ ಮೇಲೆ ಯುದ್ಧಕ್ಕೆ ತಯಾರಿ ನಡೆಸುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಈ ಗಂಭೀರ ವಿಚಾರವನ್ನು ಉದಾಸೀನ ಮಾಡುತ್ತಿದೆ.

ಗಾಢ ನಿದ್ರೆಯಲ್ಲಿರುವ ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂದು ದೂರಿದರು. ಡಿಸೆಂಬರ್ 9ರಂದು ರಾತ್ರಿ ಅರುಣಾಚಲ ಪ್ರದೇಶದ ತವಾಂಗ್‍ನಲ್ಲಿ ನಡೆದ ಘರ್ಷಣೆಯಲ್ಲಿ ಚೀನಾ ಸೈನಿಕರು ಭಾರತದ ಯೋಧರನ್ನು ಥಳಿಸಿದ್ದಾರೆ ಎಂದು ವಿವರಿಸಿದ್ದರು.

ಮಧ್ಯರಾತ್ರಿ ಧಗಧಗಿಸಿದ ಮನೆ, ಒಂದೇ ಕುಟುಂಬದ 6 ಮಂದಿ ಸಜೀವ ದಹನ

ಇದಕ್ಕೆ ಇಂದು ಬೆಳಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ಭಾರತೀಯ ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸುವಂತೆ ಕೀಳು ಮಟ್ಟದ ಹೇಳಿಕೆ ನೀಡಿರುವ ರಾಹುಲ್‍ಗಾಂಧಿಯವರನ್ನು ಮೊದಲು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಒಂದು ವೇಳೆ ರಾಹುಲ್‍ಗಾಂಧಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ತಪ್ಪು ದಾರಿಗೆಳೆಯುವ ಹೇಳಿಕೆ ನೀಡುವುದನ್ನು ಅವರು ಮುಂದುವರೆಸುತ್ತಾರೆ. ಅದು ಪ್ರತಿಪಕ್ಷಗಳ ಆಲೋಚನೆಗಳ ಮೇಲೂ ಪರಿಣಾಮ ಬೀರಲಿದೆ. ಹಾಗಾಗಿ ಎಐಸಿಸಿ ಅಧ್ಯಕ್ಷರು ಕೂಡಲೇ ರಾಹುಲ್‍ಗಾಂಧಿಯನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸಿದರು.

#Expel, #Rahul, #Gandhi, #CongressParty, #RemarksAgainstArmy, #BJP, #Congress,

Articles You Might Like

Share This Article