ಬೆಂಗಳೂರು, ಫೆ.14- ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆಗೆ ಭೂಮಿ ನೀಡಿಕೆಯಲ್ಲಿ ಅವ್ಯವಹಾರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯರು ಮಾಡಿದ ಆರೋಪ ಕಲಾಪದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಯಿತು.
ವಿಧಾನ ಪರಿಷತ್‍ನಲ್ಲಿ ಮರಿತಿಬ್ಬೇಗೌಡ, ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಬಡವರಿಗೆ ಮನೆ ಕಟ್ಟಿಕೊಡಲು ದೇವನಹಳ್ಳಿಯ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್‍ನಲ್ಲಿ ಬ್ರಿಗೆಡ್ ರಿಯಲ್ ಎಸ್ಟೇಟ್ ಸಂಸ್ಥೆಗೆ ಎರಡು ಹಂತದಲ್ಲಿ ಹತ್ತಾರು ಎಕರೆಯನ್ನು ಕೆಐಎಡಿಬಿಯಿಂದ ನೀಡಲಾಗಿದೆ.
ಆದರಲ್ಲಿ ಬಡವರಿಗೆ ಮನೆ ಕಟ್ಟಿಕೊಡುವುದಾಗಿ ಹೇಳಲಾಗಿತ್ತು. ಆದರೆ ಆ ನಿಯಮ ಪಾಲನೆಯಾಗಿಲ್ಲ. ಬ್ರಿಗೆಡ್ ಸಂಸ್ಥೆಗೆ ಭೂಮಿ ಕೊಡುವ ಸಲುವಾಗಿ ಅರ್ಹರಾದ ಹಲವು ಕೈಗಾರಿಕೋದ್ಯಮಿಗಳಿಗೆ ಭೂಮಿ ನೀಡಲಾಗದೆ ಅನ್ಯಾಯ ಮಾಡಲಾಗಿದೆ. ಸರ್ಕಾರಕ್ಕೂ ನಷ್ಟವಾಗಿದೆ ಎಂದರು.
ಇದಕ್ಕೆ ಉತ್ತರಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಸಚಿವ ಮುರುಗೇಶ್ ನಿರಾಣಿ, ಕೈಗಾರಿಕೋದ್ಯಮಿಗಳಿಗೆ ಭೂಮಿ ಹಂಚಿಕೆ ಮಾಡುವಾಗ ಉದ್ಯಮ ಹಾಗೂ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು ಹತ್ತಿರದಲ್ಲೇ ವಾಸ ಮಾಡಲು ಅಗತ್ಯವಾದ ವಸತಿ ನಿರ್ಮಿಸಲು, ಅದಕ್ಕೆ ಪೂರಕವಾಗಿ ಆಸ್ಪತ್ರೆ, ಶಿಕ್ಷಣ ಸಂಸ್ಥೆ ಸೇರಿ ಇತರ ಸೌಲಭ್ಯಗಳನ್ನು ಕಲ್ಪಿಸಲು ಮಂಜೂರಾದ ಭೂಮಿಯಲ್ಲಿ ಶೇ.15ರಷ್ಟು ಬಳಕೆ ಮಾಡಿಕೊಳ್ಳಲು ಅವಕಾಶವಿದೆ.
ಅದೇ ರೀತಿ ಬ್ರಿಗೆಡ್ ಸಂಸ್ಥೆಗೆ ತಲಾ 25 ಎಕರೆಯಂತೆ ಎರಡು ಬಾರಿ ಭೂಮಿ ನೀಡಲಾಗಿದೆ. 2002ರಲ್ಲಿ ಭೂಮಿ ನೀಡಲಾಗಿತ್ತು. ಅದರಲ್ಲಿ ಶೇ.15ರಷ್ಟು ಭೂಮಿಯನ್ನು ವಸತಿ, ಆಸ್ಪತ್ರೆ, ಶಾಲೆ ಕಟ್ಟಲು ಬಳಕೆ ಮಾಡಿಕೊಳ್ಳುತ್ತಿದ್ದು, 11 ಟವರ್ ನಿರ್ಮಿಸುವ ಗುರಿ ಇದೆ. ಈಗಾಗಲೇ ಏಳು ಟವರ್ ನಿರ್ಮಿಸಲಾಗಿದೆ.
ಬಾಕಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆ ಭೂಮಿಯಲ್ಲಿ ಬಡವರಿಗೆ ಮನೆ ನಿರ್ಮಿಸಿಕೊಡುವುದಲ್ಲ, ಅಲ್ಲಿ ಕೆಲಸ ಮಾಡುವವರಿಗೆ ನೀಡುವ ಸಲುವಾಗಿ 50 ಎಕರೆ ನೀಡಲಾಗಿದೆ ಎಂದರು.
# ನಿಯಮ ಉಲ್ಲಂಘನೆಯಾಗಿಲ್ಲ:
ಕೌಶಲ್ಯ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವದಲ್ಲಿ ಸಂಸ್ಥೆ ಸ್ಥಾಪಿಸಲು ಬ್ರಿಗೆಡ್‍ಗೆ ಭೂಮಿ ನೀಡಲಾಗಿದೆ. ಅದನ್ನು ಉಚಿತವಾಗಿ ನೀಡಿಲ್ಲ, ಭೂಮಿಯಿಂದ ಸರ್ಕಾರಕ್ಕೆ ಬರಬೇಕಾದ ಹಣ ಪಡೆಯಲಾಗಿದೆ. ಇದರಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿದರು.
# ತನಿಖೆಗೆ ಒತ್ತಾಯ:
ಆಗ ಮಧ್ಯಪ್ರವೇಶಿಸಿದ ಮರಿತಿಬ್ಬೇಗೌಡ, ಎಲ್ಲವೂ ಸರಿ ಇದೆ ಎಂದಾದರೆ ಹಂಚಿಕೆಯಾದ ಐದು ಎಕರೆ ಭೂಮಿಯನ್ನು ವಾಪಾಸ್ ಪಡೆಯಲು ಸಂಸ್ಥೆಗೆ ನೋಟಿಸ್ ನೀಡಿದ್ದೇಕೆ. ಭೂಮಿ ಮಂಜೂರಾದ ನಂತರ 9 ವರ್ಷದ ಬಳಿಕ ಕರಾರು ಮಾಡಿಕೊಂಡಿದ್ದೇಕೆ. ನಿರ್ಮಾಣವಾದ ವಸತಿಯನ್ನು ಶ್ರೀಮಂತರಿಗೆ ಮಾರಿಕೊಳ್ಳಲಾಗಿದೆ, ಕಾರ್ಮಿಕರಿಗೆ ನೀಡಿಲ್ಲ. ಈ ಬಗ್ಗೆ ಸದನ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಕ್ರಿಯಿಸಿದ ಸಚಿವ ನಿರಾಣಿ ಅವರು, 2012ರಲ್ಲಿ ನೀಡಲಾದ ಐದು ಎಕರೆಯಲ್ಲಿ ಕೌಶಲ್ಯ ಸಂಸ್ಥೆ ನಿರ್ಮಾಣವಾಗಿಲ್ಲ. ಅದಕ್ಕಾಗಿ ನೋಟಿಸ್ ನೀಡಲಾಗಿದೆ. ನ್ಯಾಯಾಲಯದ ತಕರಾರು ಮತ್ತು ಕೋವಿಡ್‍ನಿಂದ ವಿಳಂಬವಾಗಿತ್ತು ಎಂದು ಕಾರಣ ನೀಡಲಾಗಿದೆ. ಕೆಲಸಗಾರರಿಗೆ ನಿರ್ಮಿಸಲಾಗಿರುವ ಮನೆಗಳ ಹಂಚಿಕೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದರು.
ಈ ಉತ್ತರವನ್ನು ಒಪ್ಪದ ಸದಸ್ಯ ಮರಿತಿಬ್ಬೇಗೌಡ, ಮಂತ್ರಿಗಳು ರಾಜ್ಯವನ್ನು ಹರಾಜು ಹಾಕುತ್ತಾರೆ. ನಾನು ಬೇರೆ ರೂಪದಲ್ಲಿ ನೋಟಿಸ್ ನೀಡುತ್ತೇನೆ. ವ್ಯಾಪಕ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಸಭಾಪತಿ ಅವರಲ್ಲಿ ಮನವಿ ಮಾಡಿದರು. ಸಚಿವರು ರಾಜ್ಯವನ್ನು ಹರಾಜು ಹಾಕುತ್ತಾರೆ ಎಂಬ ಆರೋಪಕ್ಕೆ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಆಡಳಿತ ಪಕ್ಷದ ಸದಸ್ಯ ವೈ.ಎ.ನಾರಾಯಣಸ್ವಾಮಿ, ತೇಜೆಸ್ವಿನಿಗೌಡ ಸೇರಿ ಹಲವರು ಆಕ್ಷೇಪ ವ್ಯಕ್ತಪಡಿಸಿದರು.
#ExtensiveDiscussion, #Parishad, #LandAllotment, #malpractices,