ಕೋಲಾರ, ಜು.19- ಎಸಿಬಿ ಅಧಿಕಾರಿಗಳೆಂದು ಬೆದರಿಸಿ ಸುಲಿಗೆ ಮಾಡುತ್ತಿದ್ದ ಮೂವರನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕೋಡಿಯ ಸಾದಲಗ ಮೂಲದ ಮುರಿಗಪ್ಪ, ಸಕಲೇಶಪುರ ಮೂಲದ ರಜನಿಕಾಂತ್, ಮಹಾರಾಷ್ಟ್ರ ಕೊಲ್ಲಾಪುರ ಮೂಲದ ರಾಜೇಶ್ ಬಂಧಿತ ಆರೋಪಿಗಳು.
ಬಂಧಿತ ಆರೋಪಿ ಮುರಿಗಪ್ಪ 2008ರಲ್ಲಿ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಪೊಲೀಸ್ ಸೇವೆಯಿಂದ ವಜಾಗೊಳಿಸಲಾಗಿತ್ತು ಎಂದು ತಿಳಿದುಬಂದಿದೆ. ಕೋಲಾರದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ನಾರಾಯಣಗೌಡ ಎಂಬುವವರಿಗೆ ತಾವು ಎಸಿಬಿ ಅಧಿಕಾರಿಗಳು ಎಂದು ಕರೆ ಮಾಡಿ ನಿಮ್ಮ ಮೇಲೆ ದೂರು ಬಂದಿದೆ. ಹಣ ನೀಡದಿದ್ದರೆ ದಾಳಿ ನಡೆಸಲಾಗುವುದು ಎಂದು ಬೆದರಿಸಿದ್ದರು.
ನಿಮ್ಮ ಮೇಲೆ ದಾಳಿ ಮಾಡದಂತೆ ಇರಬೇಕಾದರೆ ನಾವು ಹೇಳಿದ ಅಕೌಂಟ್ಗೆ ಒಂದು ಲಕ್ಷ ಹಣ ಹಾಕಿ ಎಂದು ತಾಕೀತು ಮಾಡಿದ್ದರು. ಈ ಬಗ್ಗೆ ಅನುಮಾನಗೊಂಡ ನಾರಾಯಣಗೌಡ ಅವರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮಾಹಿತಿ ಕಲೆ ಹಾಕಿ ಪ್ರಕರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಎಸ್ಪಿ ಡಿ.ದೇವರಾಜ್ ಅವರು ವಿಶೇಷ ತಂಡ ರಚಿಸಿದ್ದರು. ಕಳೆದ ರಾತ್ರಿ ಮೂವರು ಬಾಗಲಕೋಟೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ವಿರುದ್ಧ ಬೆಂಗಳೂರು ಸೇರಿದಂತೆ ವಿವಿಧ ಠಾಣೆಯಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಆರೋಪಿಗಳನ್ನು ನ್ಯಾಯಾೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆ ಚುರುಕುಗೊಂಡಿದ್ದು, ಇದರ ಹಿಂದೆ ಯಾರ್ಯಾರಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.